ಬೆಂಗಳೂರು : ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟುಗಳಂಥ ಚಟುವಟಿಕೆಗಳಲ್ಲಿ ಎಲ್ಲಾ ಪಕ್ಷಗಳ ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅಕ್ರಮ ಚಟುವಟಿಕೆಗಳಲ್ಲಿ ಯಾವ ನಾಯಕರು ಭಾಗಿ ಆಗಿದ್ದಾರೆ. ಯಾವ ನಾಯಕರ ನೇತೃತ್ವದಲ್ಲಿ ನಡೆಯುತ್ತಿದೆ ಅಂತ ವಿವರಣೆ ಕೊಡಲ್ಲ. ಇದರ ಹಿಂದೆ ದೊಡ್ಡವರೇ ಇದ್ದಾರೆ. ಎಲ್ಲ ಪಕ್ಷದವರೂ ಇದರಲ್ಲಿ ಇದ್ದಾರೆ. ಹಾಗಾಗಿ ಇದರ ಬಗ್ಗೆ ನಾನು ವಿವರಣೆ ಕೊಡುವುದಿಲ್ಲ ಎಂದರು.
ಈ ವೇಳೆ, ಯಾರು ಯಾರು ದೊಡ್ಡವರು ಭಾಗಿಯಾಗಿದ್ದಾರೆಂದು ಬಹಿರಂಗ ಪಡಿಸಿ, ಮುಲಾಜಿಲ್ಲದೇ ಕ್ರಮ ವಹಿಸಲು ಸುರೇಶ್ ಕುಮಾರ್ ಆಗ್ರಹಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ನಮಗೆ ಯಾವುದೇ ಮುಲಾಜಿಲ್ಲ. ಶಾಸಕರ ಜೊತೆಗೂ ಸಭೆ ಕರೆಯುತ್ತೇನೆ. ಪರಿಸ್ಥಿತಿ ಅವಲೋಕಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮುಂಚೆ ಮಾತನಾಡಿದ ಶಾಸಕಿ ಕರೆಮ್ಮ ನಾಯಕ್, ಅಕ್ರಮ ಮರಳು ದಂಧೆ, ಮಟ್ಕಾ, ಜೂಜು ಚಟುವಟಿಕೆ ಗಳಿಗೆ ಕಡಿವಾಣ ಹಾಕಿ. ರಾಯಚೂರು ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಕಳ್ಳತನ ಪ್ರಕರಣಗಳು ಕೂಡ ಜಾಸ್ತಿ ಆಗಿವೆ. ನಾನು ಶಾಸಕಿ ಅದ ಮೇಲೆ ನನ್ನ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದೆ. ಆದರೆ ಸದ್ಯ ಆಗ್ತಾ ಇಲ್ಲ. ಗೃಹ ಸಚಿವರು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು. ಹೆಣ್ಣು ಮಕ್ಕಳು ರಾತ್ರಿ ಹೊತ್ತು ಓಡಾಡುವ ಹಾಗಿಲ್ಲ. ನಾನು ಓಡಾಡುವಾಗ ನನ್ನ ಹಿಂದೆ ಹತ್ತಾರು ವಾಹನಗಳು ಬೆನ್ನಟ್ಟಿ ಬರುತ್ತವೆ. ಪ್ರಶ್ನೆ ಮಾಡಿದ್ರೆ, ನಿಮ್ಮ ಮನೆ ತನಕ ಬಿಟ್ಟು ಬರುತ್ತೇವೆ ಅಂತಾರೆ. ಒಂದು ರೀತಿ ಬೆದರಿಕೆ ಹಾಕುವ ರೀತಿ ಮಾತಾಡ್ತಾರೆ ಎಂದು ಅಳಲು ತೋಡಿಕೊಂಡರು.
ಇದಕ್ಕುತ್ತರಿಸಿದ ಪರಮೇಶ್ವರ್, ಶಾಸಕರು ಯಾರೇ ಇದ್ದರೂ ಕ್ಷೇತ್ರದಲ್ಲಿ ಇದ್ದರೆ ಪೊಲೀಸರು ರಕ್ಷಣೆ ಕೊಡಬೇಕು, ಅದು ಪೊಲೀಸರ ಕರ್ತವ್ಯ. ಲೋಪ ಆದರೆ ಪೊಲೀಸರ ವಿರುದ್ಧ ಕ್ರಮ ಆಗಲಿದೆ. ಶಾಸಕರಿಗೆ ತೊಂದರೆ ಆಗಲು ನಾವು ಬಿಡುವುದಿಲ್ಲ. ನಿಮ್ಮ ರಕ್ಷಣೆಗೆ ಸರ್ಕಾರ ಇದೆ ಅಂತ ಭರವಸೆ ಕೊಟ್ಟರು.
ಇದನ್ನೂ ಓದಿ : ಅರೆಸ್ಟ್ ಆದ್ರೂ ಖುಷಿ ಖುಷಿಯಲ್ಲೇ ಬೆಂಬಲಿಗರನ್ನು ಮಾತಾಡಿಸಿದ ರಾಜೀವ್ ಗೌಡ



















