ಲಖನೌ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಆಗಾಗ ರಾಜಕೀಯ ಮೇಲಾಟ ನಡೆಯುತ್ತಲೇ ಇರುತ್ತದೆ. ಇದರ ಮಧ್ಯೆಯೇ, ಉತ್ತರ ಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಸ್ಟೆಲ್ ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಇಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಘೋಷಣೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಕುರಿತ ಚರ್ಚೆಯ ವೇಳೆ ಯೋಗಿ ಆದಿತ್ಯನಾಥ್ ಮಾತನಾಡಿದರು. “ಪ್ರತಿಪಕ್ಷಗಳು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವಲ್ಲಿ ವಿಫಲವಾಗಿವೆ. ಅಲ್ಲದೆ, ದಲಿತರು ಹಾಗೂ ಹಿಂದುಳಿದ ವರ್ಗದ ನಾಯಕರಿಗೂ ಪ್ರತಿಪಕ್ಷಗಳೂ ಗೌರವ ನೀಡಿಲ್ಲ. ಈಗ ನಮ್ಮ ಸರ್ಕಾರವು ಎಸ್ಸಿ, ಎಸ್ಟಿ ಹಾಸ್ಟೆಲ್ ಗಳಿಗೆ ಅಂಬೇಡ್ಕರ್ ಅವರ ಹೆಸರಿಡುವ ಮೂಲಕ, ಸಂವಿಧಾನ ಶಿಲ್ಪಿಗೆ ಗೌರವ ನೀಡುತ್ತಿದೆ” ಎಂದು ತಿಳಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಪರಂಪರೆಯನ್ನು ಜಗತ್ತಿಗೆ ಸಾರುವಲ್ಲಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರ ಬದ್ಧತೆ ಪ್ರದರ್ಶಿಸಿದೆ. ನಮ್ಮ ಸರಕಾರವು ಅಂಬೇಡ್ಕರ್ ಅವರ ಗೌರವಾರ್ಥವಾಗಿ ‘ಪಂಚ ತೀರ್ಥ’ ಸ್ಥಾಪನೆ ಸೇರಿದಂತೆ ಲಖನೌದಲ್ಲಿಅಂತಾರಾರಾಷ್ಟ್ರೀಯ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವ ಮೂಲಕ ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.