ಚೆನ್ನೈ: ಇಡೀ ದೇಶದ ಗಮನ ಸೆಳೆದಿದ್ದ 2019ರ ಪೊಲ್ಲಾಚಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ(Pollachi Sexual Assault Case) ಸಂಬಂಧಿಸಿ ತಮಿಳುನಾಡಿನ(TamilNadu) ಕೊಯಮತ್ತೂರಿನ ಸೆಷನ್ಸ್ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಪೊಲ್ಲಾಚಿಯಲ್ಲಿ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣದ ಎಲ್ಲ 9 ಆರೋಪಿಗಳನ್ನೂ ದೋಷಿಗಳು ಎಂದು ಘೋಷಿಸಿ ನ್ಯಾಯಾಲಯ ತೀರ್ಪು ನೀಡಿದೆ. ಸಾಮೂಹಿಕ ಅತ್ಯಾಚಾರ ಮತ್ತು ನಿರಂತರ ಅತ್ಯಾಚಾರ ಆರೋಪದಲ್ಲಿ ಎಲ್ಲರೂ ತಪ್ಪಿತಸ್ಥರು ಎಂದು ನ್ಯಾ.ಆರ್. ನಂದಿನಿ ದೇವಿ ತೀರ್ಪು ನೀಡಿದ್ದು, ಸದ್ಯದಲ್ಲೇ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಪ್ರಾಸಿಕ್ಯೂಷನ್ ಒತ್ತಾಯಿಸಿದೆ.
ಶಬರಿರಾಜನ್ ಅಲಿಯಾಸ್ ರಿಶ್ವಂತ್ (32), ತಿರುವನಕರಸು(34), ಟಿ.ವಸಂತ ಕುಮಾರ್(30), ಎಂ.ಸತೀಶ್ (33), ಆರ್. ಮಣಿ ಅಲಿಯಾಸ್ ಮಣಿವಣ್ಣನ್, ಪಿ.ಬಾಬು (33), ಹರೋನ್ ಪೌಲ್ (32), ಅರುಳನಾಥಮ್ (39) ಮತ್ತು ಅರುಣ್ ಕುಮಾರ್ (33) ಈ ಪ್ರಕರಣದ ಆರೋಪಿಗಳು. ಇವರೆಲ್ಲರೂ 2019ರಿಂದಲೂ ಸೇಲಂ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಇಂದು ಬೆಳಗ್ಗೆ ಎಲ್ಲ 9 ಆರೋಪಿಗಳನ್ನೂ ಪೊಲೀಸರು ಸೆಷನ್ಸ್ ಕೋರ್ಟ್ ಗೆ ಕರೆತಂದಿದ್ದರು. ಕೊಯಮತ್ತೂರಿನಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಕೋರ್ಟ್ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಕಣ್ಗಾವಲು ಇಡಲಾಗಿತ್ತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಸುಮಾರು 200 ದಾಖಲೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯವು ದೃಢಪಡಿಸಿರುವ ದೌರ್ಜನ್ಯದ ವಿಡಿಯೋಗಳು ಸೇರಿದಂತೆ 400 ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣೆ ನಡೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಬದುಕುಳಿದಿರುವ ಸಂತ್ರಸ್ತರ ಹೇಳಿಕೆಗಳು, ಡಿಜಿಟಲ್ ಪುರಾವೆಗಳೂ ಪ್ರಕರಣಕ್ಕೆ ಬಲ ನೀಡಿರುವುದಾಗಿ ಹೇಳಿದ್ದಾರೆ. ಯಾವುದೇ ಸಾಕ್ಷ್ಯವೂ ತಮ್ಮ ಹೇಳಿಕೆಯನ್ನು ಬದಲಿಸಿಲ್ಲ. ಸಾಕ್ಷಿಗಳ ಸುರಕ್ಷತಾ ಕಾಯ್ದೆಯ ಅನ್ವಯ ಅವರ ಗುರುತನ್ನು ಗೌಪ್ಯವಾಗಿಡಲಾಗಿದೆ ಹಾಗೂ ಅವರೆಲ್ಲರ ಸುರಕ್ಷತೆಯನ್ನೂ ಕಾಪಾಡಲಾಗಿದೆ ಎಂದೂ ತಿಳಿಸಿದ್ದಾರೆ.
ಏನಿದು ಪೊಲ್ಲಾಚಿ ಪ್ರಕರಣ?
ಇದು 2016ರಿಂದ 2018ರ ಅವಧಿಯಲ್ಲಿ ನಡೆದ ದೇಶವನ್ನೇ ಬೆಚ್ಚಿಬೀಳಿಸಿದ ಲೈಂಗಿಕ ಕಿರುಕುಳ, ಬ್ಲ್ಯಾಕ್ ಮೇಲ್ ಪ್ರಕರಣವಾಗಿದೆ. ಕಾಲೇಜು ವಿದ್ಯಾರ್ಥಿಯರು ಸೇರಿದಂತೆ ಹಲವು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಆ ದೃಶ್ಯಗಳನ್ನು ವಿಡಿಯೋ ಚಿತ್ರೀಕರಣ ಮಾಡಿ, ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ, ಅವರಿಂದ ಲೈಂಗಿಕ ಸಹಕಾರ ಮತ್ತು ಹಣವನ್ನು ವಸೂಲಿ ಮಾಡುತ್ತಿದ್ದ ಗ್ಯಾಂಗ್‌ವೊಂದು ತಮಿಳುನಾಡಿನ ಪೊಲ್ಲಾಚಿಯಲ್ಲಿ ಸಕ್ರಿಯವಾಗಿತ್ತು. ಈ ಪ್ರಕರಣವು ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನೇ ಕಲಕಿತ್ತು.
ಆರೋಪಿಗಳಾದ 9 ಮಂದಿಯ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳಡಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಸಂತ್ರಸ್ತರ ಮೇಲೆ ಮತ್ತೆ ಮತ್ತೆ ಅತ್ಯಾಚಾರ, ಕ್ರಿಮಿನಲ್ ಸಂಚು, ಲೈಂಗಿಕ ಕಿರುಕುಳು ಮತ್ತು ಬ್ಲ್ಯಾಕ್ ಮೇಲ್ ಆರೋಪ ಹೊರಿಸಲಾಗಿತ್ತು. 2016ರಿಂದ 2018ರವರೆಗೆ ಈ ಅಪರಾಧ ನಡೆದಿತ್ತು. ಅತ್ಯಾಚಾರದ ವಿಡಿಯೋಗಳನ್ನೇ ಬಳಸಿಕೊಂಡು ಅದನ್ನು ಬಹಿರಂಗಪಡಿಸುವುದಾಗಿ ಹೆದರಿಸಿ ಅದೇ ಸಂತ್ರಸ್ತೆಯರಿಗೆ ಮತ್ತೆ ಮತ್ತೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಆರಂಭದಲ್ಲಿ ಪೊಲ್ಲಾಚಿ ಪೊಲೀಸರೇ ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರದಲ್ಲಿ ಅದನ್ನು ತಮಿಳುನಾಡು ಕ್ರೈಂ ಬ್ರಾಂಚ್‌ನ ಅಪರಾಧ ತನಿಖಾ ದಳಕ್ಕೆ, ಬಳಿಕ ಸಿಬಿಐಗೆ ವಹಿಸಲಾಯಿತು.



















