ಗುಜರಾತ್ : ಗುಜರಾತ್ ರಾಜಕೀಯದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಸಿಎಂ ಭೂಪೇಂದ್ರ ಪಟೇಲ್ ಹೊರತುಪಡಿಸಿ ರಾಜ್ಯದ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದಲ್ಲಿರುವ ಎಲ್ಲಾ 16 ಸಚಿವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಏಕೆಂದರೆ, ನಾಳೆ (ಶುಕ್ರವಾರ) ಬೆಳಿಗ್ಗೆ 11:30ಕ್ಕೆ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟ ಪುನರ್‌ಚನೆ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಸಚಿವರಿಂದ ರಾಜೀನಾಮೆಗಳನ್ನು ತೆಗೆದುಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಗುಜರಾತ್‌ನಲ್ಲಿನ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ 5 ಸಚಿವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, 16 ಹೊಸ ಮುಖಗಳನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬಹುದು. ಇಬ್ಬರು ಮಹಿಳಾ ನಾಯಕಿಯರನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಹೊಸ ಸಂಪುಟದಲ್ಲಿ ಸುಮಾರು 20ರಿಂದ 23 ಸದಸ್ಯರಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಆಚಾರ್ಯ ದೇವವ್ರತ್‌ಜಿ ಅವರು ಸಂಪುಟದ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಇಲ್ಲಿಯವರೆಗೆ, ಗುಜರಾತ್ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 17 ಸಚಿವರು ಇದ್ದರು. ಈ ಪೈಕಿ ಎಂಟು ಮಂದಿ ಕ್ಯಾಬಿನೆಟ್ ಮಟ್ಟದ ಮಂತ್ರಿಗಳಾಗಿದ್ದರೆ, ಅದೇ ಸಂಖ್ಯೆಯವರು ರಾಜ್ಯ ಸಚಿವರಾಗಿದ್ದರು. ಗುಜರಾತ್ ವಿಧಾನಸಭೆಯು ಒಟ್ಟು 182 ಸದಸ್ಯರನ್ನು ಹೊಂದಿದೆ. ಇವರಲ್ಲಿ ಶೇಕಡಾ 15ರಷ್ಟು ಅಥವಾ 27 ಜನರು ಸಚಿವರಾಗಬಹುದು.