ವಾಷಿಂಗ್ಟನ್: ತಮ್ಮನ್ನು ತಾವು ಟೈಮ್ ಟ್ರಾವೆಲರ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು 2025ರ ಕುರಿತು ಭವಿಷ್ಯವಾಣಿ ನುಡಿದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.
ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿಯು ಇನ್ ಸ್ಟಾಗ್ರಾಂನಲ್ಲಿ ವಿಡೀಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಈ ವರ್ಷ ನಡೆಯಲಿರುವ ಪ್ರಮಖ ದುರಂತಗಳನ್ನು ಪಟ್ಟಿ ಮಾಡಿದ್ದಾರೆ. ಜೊತೆಗೆ ಅವುಗಳು ಯಾವಾಗ ಸಂಭವಿಸುತ್ತವೆ ಎಂಬ 5 ನಿರ್ದಿಷ್ಟ ದಿನಾಂಕಗಳನ್ನೂ ನೀಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಒಕ್ಲಹೋಮಾದಲ್ಲಿ ವಿನಾಶಕಾರಿ ಸುಂಟರಗಾಳಿ, ಅಮೇರಿಕದಲ್ಲಿ ನಾಗರಿಕ ಯುದ್ಧ, ಬೃಹತ್ ಸಮುದ್ರ ಜೀವಿಯ ಆವಿಷ್ಕಾರ, ಚಾಂಪಿಯನ್ ಎಂಬ ಅನ್ಯಗ್ರಹ ಜೀವಿಯ ಆಗಮನ ಮತ್ತು ಅಮೇರಿಕದಲ್ಲಿ ಭಾರೀ ಚಂಡಮಾರುತ ಕೂಡ ಅವರ ಭವಿಷ್ಯವಾಣಿಯಲ್ಲಿ ಸೇರಿವೆ.
ನಾನು ಭವಿಷ್ಯಕ್ಕೆ ಪ್ರಯಾಣಿಸಿದ್ದೇನೆ ಎಂದು ಹೇಳಿಕೊಂಡಿರುವ ಥಾಂಪ್ಸನ್, ಇದೇ ವರ್ಷದ ಏಪ್ರಿಲ್ 6 ರಂದು ಗಂಟೆಗೆ 1,046 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಭಾರೀ ಸುಂಟರಗಾಳಿಯೊಂದು ಅಮೆರಿಕದ ಒಕ್ಲಹೋಮವನ್ನು ನಾಶಪಡಿಸಲಿದೆ ಎಂದು ಹೇಳಿದ್ದಾರೆ. ಅದೇ ರೀತಿ, ಮೇ 27 ರಂದು, ಅಮೆರಿಕದಲ್ಲಿ ಎರಡನೇ ಅಂತರ್ಯುದ್ಧವು ಪ್ರಾರಂಭವಾಗುತ್ತದೆ, ಇದರ ಪರಿಣಾಮವಾಗಿ ಟೆಕ್ಸಾಸ್ ಪ್ರತ್ಯೇಕಗೊಳ್ಳುತ್ತದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡ ಜಾಗತಿಕ ಸಂಘರ್ಷಕ್ಕೆ ಇದು ನಾಂದಿ ಹಾಡುತ್ತದೆ, ಅಂತಿಮವಾಗಿ ಅಮೆರಿಕವು ಸರ್ವನಾಶವಾಗುತ್ತದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ
ಸೆಪ್ಟೆಂಬರ್ 1 ರಂದು ಚಾಂಪಿಯನ್ ಎಂಬ ಹೆಸರಿನ ಅನ್ಯಗ್ರಹ ಜೀವಿಯೊಂದು 12,000 ಮಾನವರನ್ನು ಹೊತ್ತು ಮತ್ತೊಂದು ಜನವಸತಿ ಗ್ರಹಕ್ಕೆ ಸಾಗಿಸಲಿದೆ. ಈ 12 ಸಾವಿರ ಜನರ ಸುರಕ್ಷತೆಗಾಗಿಯೇ ಚಾಂಪಿಯನ್ ಈ ಕಾರ್ಯವೆಸಗಲಿದೆ ಎಂದೂ ಥಾಂಪ್ಸನ್ ಹೇಳಿದ್ದಾರೆ. ಇದೇ ವೇಳೆ ಭೂಮಿಗೆ ಹಾನಿ ಮಾಡುವ ಉದ್ದೇಶ ಹೊಂದಿರುವಂಥ ಅನ್ಯಗ್ರಹ ಜೀವಿಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.
ಇನ್ನು ಸೆಪ್ಟೆಂಬರ್ 19 ರಂದು ಅಮೆರಿಕದ ಪೂರ್ವ ಕರಾವಳಿಗೆ ಭಾರಿ ಚಂಡಮಾರುತವೊಂದು ಅಪ್ಪಳಿಸಲಿದೆ ಎಂದಿದ್ದಾರೆ ಥಾಮ್ಸನ್. ಕೊನೆಯದಾಗಿ, ನವೆಂಬರ್ 3 ರಂದು, ಪೆಸಿಫಿಕ್ ಮಹಾಸಾಗರದಲ್ಲಿ ನೀಲಿ ತಿಮಿಂಗಿಲಕ್ಕಿಂತ ಆರು ಪಟ್ಟು ಗಾತ್ರದ, ಸೆರೆನ್ ಕ್ರೌನ್ ಎಂಬ ಹೆಸರಿನ ಬೃಹತ್ ಸಮುದ್ರ ಜೀವಿಯೊಂದನ್ನು ಪತ್ತೆ ಹಚ್ಚಲಾಗುವುದು ಎಂದೂ ಅವರು ಹೇಳಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಥಾಂಪ್ಸನ್ ಅವರ ಈ ವೀಡಿಯೊ 2.60 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ, ಕೆಲವರು ಈ ಭವಿಷ್ಯವಾಣಿ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸ್ವಯಂ ಘೋಷಿತ ಟೈಮ್ ಟ್ರಾವೆಲರ್ ಭವಿಷ್ಯದಲ್ಲಿದ್ದುಕೊಂಡೇ ಮುಂದಿನ ವಾರದ ಲಾಟರಿ ಸಂಖ್ಯೆಗಳನ್ನು ಪಡೆಯಬೇಕಾಗಿತ್ತು ಎಂದು ಜೋಕ್ ಮಾಡಿದ್ದಾರೆ.
” ನಾನು ಈ ವೀಡಿಯೊವನ್ನು ಸೇವ್ ಮಾಡಿಟ್ಟುಕೊಳ್ಳುತ್ತೇನೆ, ನೀವು ನುಡಿದಿರುವ ಭವಿಷ್ಯವಾಣಿಯಲ್ಲಿ ಯಾವುದಾದರೂ ಒಂದು ಸುಳ್ಳಾದರೂ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿದ್ದೇನೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.