ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಹಲವು ಬಾರಿ ಮದ್ಯದ ದರ ಏರಿಕೆ ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿತ್ತು. ಆದರೆ, ಈಗ ಸರ್ಕಾರಕ್ಕೆ ಮದ್ಯಪ್ರಿಯರೇ ಶಾಕ್ ನೀಡಿ, ಸರ್ಕಾರದ ಕಿಕ್ ಇಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಗುರಿ ಮೀರಿ ಮದ್ಯ ಮಾರಾಟವಾಗುತ್ತಿತ್ತು. ಆದರೆ, ಈಗ ಮತ್ತೆ ಮದ್ಯ ಮಾರಾಟ ಇಳಿಕೆಯತ್ತ ಮುಖ ಮಾಡಿದೆ. ಕಳೆದ 10 ತಿಂಗಳುಗಳಿಂದ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮದ್ಯ ಮಾರಾಟವಾಗುತ್ತಿಲ್ಲ. ಮದ್ಯ ಮಾರಾಟದ ಟಾರ್ಗೆಟ್ ರೀಚ್ ಆಗುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ಸರ್ಕಾರದ ಆದಾಯಕ್ಕೆ ಕೊಕ್ಕೆ ಹಾಕಿದೆ.
ಕಳೆದ 10 ತಿಂಗಳುಗಳಲ್ಲಿ ಕೇವಲ 27,872 ಕೋಟಿ ರೂ. ಆದಾಯ ಅಬಕಾರಿ ಇಲಾಖೆಯಿಂದ ಬಂದಿದೆ. ಆದರೆ, ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ 38,525 ಕೋಟಿ ರೂ. ಆದಾಯದ ಟಾರ್ಟೆಗ್ ನೀಡಲಾಗಿತ್ತು. ಟಾರ್ಗೆಟ್ ಗಮನಿಸಿದರೆ ಇನ್ನು ಕೇವಲ ಎರಡೂವರೆ ತಿಂಗಳುಗಳಲ್ಲಿ ಅಬಕಾರಿ ಇಲಾಖೆ 10,653 ಕೋಟಿ ರೂ. ಆದಾಯ ಸಂಗ್ರಹಿಸಬೇಕಿದೆ. ಆದರೆ, ಇನ್ನುಳಿದ ಎರಡು ತಿಂಗಳುಗಳಲ್ಲಿ ಈ ಟಾರ್ಗೆಟ್ ತಲುಪುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಇದು ಅಬಕಾರಿ ಇಲಾಖೆಗೆ ತಲೆನೋವು ತಂದಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಅಬಕಾರಿ ಇಲಾಖೆ ಟಾರ್ಗೆಟ್ ರೀಚ್ ಮಾಡದಿರುವುದು ಕೂಡ ಸರ್ಕಾರದ ಆತಂಕಕ್ಕೆ ಕಾರಣವಾಗುತ್ತಿದೆ.