ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಸುದ್ದಿಯಾಗಿರುವ ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯ, ಇದೀಗ ಮತ್ತಷ್ಟು ಗಂಭೀರ ಭಯೋತ್ಪಾದಕ ಕೃತ್ಯಗಳೊಂದಿಗೆ ತಳುಕು ಹಾಕಿಕೊಂಡಿದೆ. ಇಂಡಿಯನ್ ಮುಜಾಹಿದೀನ್ (IM) ಭಯೋತ್ಪಾದಕ ಸಂಘಟನೆಯ ಪ್ರಮುಖ ಸದಸ್ಯ ಮಿರ್ಜಾ ಶಾದಾಬ್ ಬೇಗ್ ಕೂಡ ಇದೇ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಹಿಂದೆ “ವೈಟ್ ಕಾಲರ್” ಭಯೋತ್ಪಾದಕ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ತನಿಖೆಯ ಕೇಂದ್ರ ಬಿಂದುವಾಗಿದ್ದ ಈ ಶಿಕ್ಷಣ ಸಂಸ್ಥೆ, ಇದೀಗ ದೇಶಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟಗಳ ರೂವಾರಿಗಳ ತಾಣವಾಗಿತ್ತೇ ಎಂಬ ಅನುಮಾನ ಹುಟ್ಟುಹಾಕಿದೆ.
ಇಂಡಿಯನ್ ಮುಜಾಹಿದೀನ್ ನಾಯಕನ ಶೈಕ್ಷಣಿಕ ಹಿನ್ನೆಲೆ
ಉತ್ತರ ಪ್ರದೇಶದ ಅಜಂಗಢ ಮೂಲದ ಮಿರ್ಜಾ ಶಾದಾಬ್ ಬೇಗ್, 2007ರಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದಿದ್ದ. ಮೂಲಗಳ ಪ್ರಕಾರ, ಆತ ವಿದ್ಯಾರ್ಥಿಯಾಗಿದ್ದಾಗಲೇ ಬಾಂಬ್ ಸ್ಫೋಟಗಳ ಸಂಚಿನಲ್ಲಿ ಭಾಗಿಯಾಗಿದ್ದ. ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ಕಲಿತಿದ್ದ ಕಾರಣ, ಬಾಂಬ್ ತಯಾರಿಕೆಯ ತಾಂತ್ರಿಕ ಮತ್ತು ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಆತನಿಗೆ ಆಳವಾದ ಜ್ಞಾನವಿತ್ತು. ಗೋರಖ್‌ಪುರ ಸ್ಫೋಟದಲ್ಲಿ ಈತನ ಪಾತ್ರ ದೃಢಪಟ್ಟ ನಂತರ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಸದ್ಯ ಆತ ತಲೆಮರೆಸಿಕೊಂಡಿದ್ದು, 2019ರಲ್ಲಿ ಅಫ್ಘಾನಿಸ್ತಾನದಲ್ಲಿ ಕೊನೆಯದಾಗಿ ಪತ್ತೆಯಾಗಿದ್ದ. ಆತನ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಸರಣಿ ಸ್ಫೋಟಗಳಲ್ಲಿ ನೇರ ಭಾಗಿ
2008ರ ಜೈಪುರ ಮತ್ತು ಅಹಮದಾಬಾದ್ ಸರಣಿ ಸ್ಫೋಟಗಳಲ್ಲಿ ಬೇಗ್ ಪ್ರಮುಖ ಪಾತ್ರ ವಹಿಸಿದ್ದ. ಜೈಪುರ ಸ್ಫೋಟಕ್ಕೆ ಅಗತ್ಯವಿದ್ದ ಸ್ಫೋಟಕಗಳನ್ನು ಸಂಗ್ರಹಿಸಲು ಆತ ಕರ್ನಾಟಕದ ಉಡುಪಿಗೆ ಭೇಟಿ ನೀಡಿದ್ದ. ಅಲ್ಲಿ ಇಂಡಿಯನ್ ಮುಜಾಹಿದೀನ್ ಸದಸ್ಯರಾದ ರಿಯಾಜ್ ಭಟ್ಕಳ್ ಮತ್ತು ಯಾಸಿನ್ ಭಟ್ಕಳ್ ಅವರಿಗೆ ಡಿಟೋನೇಟರ್ ಮತ್ತು ಬೇರಿಂಗ್‌ಗಳನ್ನು ಪೂರೈಸಿದ್ದ. ಅಹಮದಾಬಾದ್ ಸ್ಫೋಟಕ್ಕೂ 15 ದಿನಗಳ ಮುಂಚಿತವಾಗಿ ಗುಜರಾತ್ ರಾಜಧಾನಿಗೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ (ರೆಕ್ಕಿ) ನಡೆಸಿದ್ದ. ಆತಿಫ್ ಅಮೀನ್ ಮತ್ತು ಇತರರೊಂದಿಗೆ ಸೇರಿ ಮೂರು ತಂಡಗಳನ್ನು ರಚಿಸಿ, ಬಾಂಬ್ ತಯಾರಿಕೆ ಮತ್ತು ದಾಳಿಯ ಯೋಜನೆ ರೂಪಿಸಿದ್ದನು.
ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ವಾಹನ ನಿಲುಗಡೆ ಪ್ರದೇಶದಲ್ಲಿ ಸ್ಫೋಟಗೊಂಡ ಹ್ಯುಂಡೈ ಐ20 ಕಾರಿನ ಚಾಲಕ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ (NAAC) ನಿಯಮಗಳ ಉಲ್ಲಂಘನೆ ಮತ್ತು ವಂಚನೆ ಆರೋಪದಡಿ ದೆಹಲಿ ಕ್ರೈಂ ಬ್ರಾಂಚ್ ಈಗಾಗಲೇ ವಿಶ್ವವಿದ್ಯಾಲಯದ ವಿರುದ್ಧ 2 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಪೊಲೀಸರ ವಿಶೇಷ ತಂಡವು ಓಖ್ಲಾದಲ್ಲಿರುವ ವಿಶ್ವವಿದ್ಯಾಲಯದ ಕಚೇರಿಗೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದೆ.
ಇದನ್ನೂ ಓದಿ: ಕಾರ್ಖಾನೆಯ ಕೊಠಡಿಯಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರ ನಿಗೂಢ ಸಾವು : ಇದ್ದಿಲು ಬತ್ತಿಯೇ ಶಾಪವಾಯಿತೇ?


















