ಬೆಂಗಳೂರು: ಪ್ಯಾನ್ ಇಂಡಿಯಾ ಚಿತ್ರ ಕಣ್ಣಪ್ಪ ಚಿತ್ರದ ಟೀಸರ್ ಮಾ. 1ರಂದು ಬಿಡುಗಡೆಯಾಗಲಿದ್ದು, ಏ. 25ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.
ಕಣ್ಣಪ್ಪನ ಪೌರಾಣಿಕ ಕಥೆ ಆಧರಿಸಿದ ಮಹಾಕಾವ್ಯ ಚಿತ್ರ ‘ಕಣ್ಣಪ್ಪ’ ಚಿತ್ರದ ಬಹುನಿರೀಕ್ಷಿತ ಟೀಸರ್ ನ್ನು ಮುಂಬೈನಲ್ಲಿ ಅನಾವರಣಗೊಳಿಸಲಾಯಿತು. ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್, ನಾಯಕ ನಟ ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ವಿನಯ್ ಮಹೇಶ್ವರಿ, ಈ ಟೀಸರ್ ಭಕ್ತಿ, ತ್ಯಾಗ ಮತ್ತು ಭವ್ಯತೆಯ ಐತಿಹಾಸಿಕ ನಿರೂಪಣೆಯ ಒಂದು ನೋಟವನ್ನು ನೀಡುತ್ತದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಎಂ. ಮೋಹನ್ ಬಾಬು ನಿರ್ಮಾಣದ ಕಣ್ಣಪ್ಪ ಚಿತ್ರವು, ಪೌರಾಣಿಕ ಕಥೆಯಾದರೂ, ಆಧುನಿಕ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ, ಪ್ರೇಕ್ಷಕರನ್ನು ದೃಶ್ಯ ಮತ್ತು ಭಾವನಾತ್ಮಕ ಪ್ರಯಾಣಕ್ಕೆ ಕರೆದೊಯ್ಯುವ ಗುರಿ ಹೊಂದಿದೆ ಎಂದಿದ್ದಾರೆ.
ಶಿವನ ಪಾತ್ರ ಮಾಡಿರುವ ಅಕ್ಷಯ್ ಕುಮಾರ್ ಮಾತನಾಡಿ, ಆರಂಭದಲ್ಲಿ ನಾನು ಎರಡು ಬಾರಿ ಆ ಪ್ರಸ್ತಾಪವನ್ನು ತಿರಸ್ಕರಿಸಿದೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಶಿವನನ್ನು ದೊಡ್ಡ ಪರದೆಯ ಮೇಲೆ ಜೀವಂತಗೊಳಿಸಲು ನಾನೇ ಸರಿಯಾದ ವ್ಯಕ್ತಿ ಎಂಬ ವಿಷ್ಣುವಿನ ಅಚಲ ನಂಬಿಕೆ ನನಗೆ ನಿಜವಾಗಿಯೂ ಮನವರಿಕೆ ಮಾಡಿಕೊಟ್ಟಿತು. ಕಥೆ ಶಕ್ತಿಯುತವಾಗಿದೆ. ಒಂದು ದೃಶ್ಯ ಮೇರುಕೃತಿಯಾಗಿ ಹೊರಹೊಮ್ಮಿದೆ. ಈ ಅದ್ಭುತ ಪ್ರಯಾಣದ ಭಾಗವಾಗಲು ನನಗೆ ಗೌರವವಾಗಿದೆ ಎಂದಿದ್ದಾರೆ. ಕಣ್ಣಪ್ಪ ಪಾತ್ರದಲ್ಲಿ ನಟಿಸಿರುವ ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಚಿತ್ರದ ಬಗ್ಗೆ ಮಾತನಾಡಿದರು.