ಉಡುಪಿ: ಉಪ್ಪೂರಿನ ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಲ್ಲವರ ಯುವವೇದಿಕೆ ನೇತೃತ್ವದಲ್ಲಿ ಬುಧವಾರ ಬ್ರಹ್ಮಾವರ ಪೋಲಿಸ್ ಠಾಣೆಯ ಎದುರುಗಡೆ ಪ್ರತಿಭಟನೆ ನಡೆಸಲಾಯಿತು. ಠಾಣೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ದೌರ್ಜನ್ಯ ಎಸಗಿರುವ ಪೋಲಿಸರ ವಿರುದ್ಧ ಎಫ್‌ಐಆರ್ ದಾಖಲಿಸುಸುವಂತೆ ಆಗ್ರಹಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ವಾರೆಂಟ್ ಜಾರಿ ಸಂಬಂಧ ಮಲ್ಪೆ ಪೊಲೀಸರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರಿನಲ್ಲಿರುವ ಆರೋಪಿಯ ಸಂಬಂಧಿಕರ ಮನೆಗೆ ಬಂದು ಅಕ್ಷತಾಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಅಕ್ಷತಾ ಪೂಜಾರಿ ಬ್ರಹ್ಮಾವರ ಠಾಣೆಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಲಿಲ್ಲ. ಆದರೆ ಆಕೆಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಆದುದರಿಂದ ಅಕ್ಷತಾ ನೀಡಿರುವ ಹೇಳಿಕೆಯಂತೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಅವರು ತಿಳಿಸಿದರು.
ಇದೇ ವೇಳೆ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಹಾಗೂ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ಮಧ್ಯಾಹ್ನ 3ಗಂಟೆ ಸುಮಾರಿಗೆ ಆರಂಭಗೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ತಮ್ಮ ಪಟ್ಟು ಸಡಿಲಿಸದೆ ಸಂಜೆ 7.30ರವರೆಗೆ ಮುಂದುವರೆಸಿದರು. ಪರಿಸ್ಥಿತಿ ತೀವ್ರ ಗೊಳ್ಳುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಠಾಣಾ ಆವರಣದಲ್ಲಿ ನಿಯೋಜನೆ ಮಾಡಲಾಯಿತು.ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್, ಠಾಣೆಗೆ ಆಗಮಿಸಿ, ಅಕ್ಷತಾ ನೀಡಿದ ದೂರಿನಂತೆ ಎಫ್‌ಐಆರ್ ದಾಖಲಿಸುವ ಭರವಸೆ ನೀಡಿದರು.
ಬಿಲ್ಲವ ಮುಖಂಡರು ಸೇರಿದಂತೆ ನೂರಾರು ಪ್ರತಿಭಟನಕಾರರ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ ಕೊನೆಗೆ ಅಕ್ಷತಾ ನೀಡಿದ ದೂರಿನಂತೆ ಮೂವರು ಪೊಲೀಸರು ಸಹಿತ ಐವರ ವಿರುದ್ಧ ಪ್ರಕರಣ ದಾಖಲಿಸಿತು. ವಾರೆಂಟ್ ಜಾರಿ ಸಂಬಂಧ ಅಕ್ಷತಾ ಪೂಜಾರಿ ಮನೆಗೆ ತೆರಳಿ ದೌರ್ಜನ್ಯ ಎಸಗಿದ್ದಾರೆಂದು ದೂರಲಾದ ಮಲ್ಪೆ ಠಾಣೆಯ ಮೂವರು ಪೊಲೀಸರು ಹಾಗೂ ವಾರೆಂಟ್ ಜಾರಿಯಾದ ಪ್ರಕರಣದ ದೂರುದಾರ ಮತ್ತು ಆತನ ಮಗನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ನಿಂದ ರೈತ ಮಹಿಳೆಯ ಮನೆ ಜಪ್ತಿ | ಬೀಗ ಒಡೆದ ರೈತ ಸಂಘದ ಮುಖಂಡರು



















