ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ದೀಪಾವಳಿ ಆಚರಣೆ ಕುರಿತು ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ದೀಪಗಳು ಮತ್ತು ಕ್ಯಾಂಡಲ್‌ಗಳ ಮೇಲೆ “ಹಣ ವ್ಯರ್ಥ” ಮಾಡುವುದನ್ನು ನಿಲ್ಲಿಸಿ ಎಂದು ಅವರು ಸಲಹೆ ನೀಡಿದ್ದಲ್ಲದೇ, ಕ್ರಿಸ್‌ಮಸ್ ಆಚರಣೆಗಳೊಂದಿಗೆ ಅದನ್ನು ಹೋಲಿಸುವ ಮೂಲಕ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಅವರ ಈ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಭೆಯೊಂದರಲ್ಲಿ ಮಾತನಾಡಿದ ಅಖಿಲೇಶ್ ಯಾದವ್, “ನಾನು ಶ್ರೀರಾಮನ ಹೆಸರಿನಲ್ಲಿ ಒಂದು ಸಲಹೆ ನೀಡುತ್ತೇನೆ. ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಮಯದಲ್ಲಿ ನಗರಗಳು ತಿಂಗಳುಗಟ್ಟಲೆ ಬೆಳಗುತ್ತವೆ. ಅಷ್ಟು ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ. ನಾವು ಅವರನ್ನು ನೋಡಿ ಕಲಿಯಬೇಕು. ನಾವು ದೀಪಗಳು ಮತ್ತು ಕ್ಯಾಂಡಲ್‌ಗಳ ಮೇಲೆ ಹಣ ಖರ್ಚು ಮಾಡಿ, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಯಾಕೆ? ಈ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ನಾವು ಅಧಿಕಾರಕ್ಕೆ ಬಂದರೆ ಇದಕ್ಕಿಂತ ಸುಂದರವಾದ ದೀಪಾಲಂಕಾರ ವ್ಯವಸ್ಥೆ ಮಾಡುತ್ತೇವೆ,” ಎಂದು ಹೇಳಿದ್ದರು.

ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್, “ಯುಪಿಯ ಮಾಜಿ ಮುಖ್ಯಮಂತ್ರಿ ದೀಪಾವಳಿಯ ಸಂದರ್ಭದಲ್ಲಿ ಕ್ರಿಸ್‌ಮಸ್ ಅನ್ನು ಹೊಗಳುತ್ತಿದ್ದಾರೆ. ದೀಪಗಳ ಸಾಲು ಅವರ ಹೃದಯವನ್ನು ಎಷ್ಟು ಸುಟ್ಟಿದೆ ಎಂದರೆ, ‘ದೀಪ ಮತ್ತು ಕ್ಯಾಂಡಲ್‌ಗಳ ಮೇಲೆ ಹಣ ವ್ಯರ್ಥ ಮಾಡಬೇಡಿ, ಕ್ರಿಸ್‌ಮಸ್‌ನಿಂದ ಕಲಿಯಿರಿ’ ಎಂದು 100 ಕೋಟಿ ಹಿಂದೂಗಳಿಗೆ ಉಪದೇಶ ನೀಡುತ್ತಿದ್ದಾರೆ,” ಎಂದು ಎಕ್ಸ್ (ಟ್ವೀಟರ್) ಖಾತೆಯಲ್ಲಿ ಕಿಡಿಕಾರಿದ್ದಾರೆ.
ಅಖಿಲೇಶ್ ಅವರು ಭಾರತೀಯ ಸಂಸ್ಕೃತಿಗಿಂತ ವಿದೇಶಿ ಸಂಪ್ರದಾಯಗಳನ್ನು ವೈಭವೀಕರಿಸುತ್ತಿದ್ದಾರೆ ಎಂದು ಬನ್ಸಲ್ ಆರೋಪಿಸಿದ್ದಾರೆ. “ಸ್ವಯಂ ಯಾದವರೆಂದು ಕರೆದುಕೊಳ್ಳುವ, ಜಿಹಾದಿಗಳು ಮತ್ತು ಮತಾಂತರ ಗ್ಯಾಂಗ್‌ಗಳ ರಕ್ಷಕನಂತೆ ಕಾಣುವ ಇವರಿಗೆ ಹಿಂದೂಗಳಿಗಿಂತ ಕ್ರಿಶ್ಚಿಯನ್ನರ ಮೇಲೆ ಹೆಚ್ಚು ಪ್ರೀತಿ ಇದ್ದಂತಿದೆ. ಕ್ರೈಸ್ತ ಧರ್ಮ ಅಸ್ತಿತ್ವಕ್ಕೆ ಬರುವ ಮೊದಲೇ ದೀಪಾವಳಿಯನ್ನು ಆಚರಿಸಲಾಗುತ್ತಿತ್ತು. ಈಗ ಹಿಂದೂ ಸಮಾಜ ಕ್ರಿಶ್ಚಿಯನ್ನರಿಂದ ಕಲಿಯಬೇಕೆಂದು ಹೇಳಲಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಇನ್ನೂ ಎರಡು ತಿಂಗಳಿರುವ ಕ್ರಿಸ್‌ಮಸ್ ಹಬ್ಬ ಅವರಿಗೆ ಈಗಲೇ ಬಂದಂತೆ ಕಾಣುತ್ತಿದೆ. ಆದರೆ, ಇನ್ನು ಎರಡೇ ದಿನಗಳಲ್ಲಿ ಬರುವ ದೀಪಾವಳಿ ಮತ್ತು ನಮ್ಮ ಕುಂಬಾರ ಸಹೋದರರು ಮಾಡಿದ ದೀಪಗಳು ಈ ನಾಯಕರಿಗೆ ಕಿರಿಕಿರಿ ಉಂಟುಮಾಡಿದಂತೆ ತೋರುತ್ತಿದೆ. ಅಯೋಧ್ಯೆಯ ವೈಭವ ಮತ್ತು ಹಿಂದೂಗಳ ಸಂತೋಷದ ಬಗ್ಗೆ ಈ ಅಸೂಯೆ ಸರಿಯಲ್ಲ. ಬಹುಶಃ ಅದಕ್ಕಾಗಿಯೇ ಜನರು ಅವರ ಪಕ್ಷವನ್ನು ಸಮಾಜವಾದಿ ಪಕ್ಷ ಎನ್ನುವ ಬದಲು ‘ಅಸಮಾಜವಾದಿ ಪಕ್ಷ’ (ಸಮಾಜ ವಿರೋಧಿ ಪಕ್ಷ) ಎಂದು ಕರೆಯುತ್ತಾರೆ!” ಎಂದು ಬನ್ಸಲ್ ಕುಟುಕಿದ್ದಾರೆ.