ಬಾರಾಮತಿ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 5 ಮಂದಿಯನ್ನು ಬಲಿಪಡೆದುಕೊಂಡ ವಿಮಾನವು ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ರನ್‌ವೇ ಪಕ್ಕದಲ್ಲೇ ಪತನಗೊಂಡು ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಬೈನಿಂದ ಹೊರಟಿದ್ದ ಚಾರ್ಟರ್ಡ್ ವಿಮಾನವು ಇಳಿಯುವ ವೇಳೆ ನಿಯಂತ್ರಣ ತಪ್ಪಿ ರನ್ ವೇ ಪಕ್ಕದಲ್ಲೇ ಸ್ಫೋಟಗೊಂಡಿದೆ. ಬೆಳಿಗ್ಗೆ 8:45ಕ್ಕೆ ಈ ಭೀಕರ ದುರ್ಘಟನೆ ಸಂಭವಿಸಿದೆ.
ಬೆಳಗ್ಗೆ ಸುಮಾರು 8 ಗಂಟೆಗೆ ಮುಂಬೈನಿಂದ ಹೊರಟಿದ್ದ ಲಿಯರ್‌ಜೆಟ್ 45 (ನೋಂದಣಿ ಸಂಖ್ಯೆ: VT-SSK) ವಿಮಾನವು ಬಾರಾಮತಿ ನಿಲ್ದಾಣದಲ್ಲಿ ಇಳಿಯಲು ಸಿದ್ಧವಾಗಿತ್ತು. 8:45ರ ಸುಮಾರಿಗೆ ವಿಮಾನವು ರನ್‌ವೇಯನ್ನು ಸ್ಪರ್ಶಿಸುವ (Touch down) ಹಂತದಲ್ಲಿದ್ದಾಗ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ರನ್‌ವೇಯಿಂದ ಪಕ್ಕಕ್ಕೆ ಜಾರಿ ಬಿದ್ದ ತಕ್ಷಣ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ.
ಚೂರುಚೂರಾದ ವಿಮಾನ: ಮುಗಿಲು ಮುಟ್ಟಿದ ದಟ್ಟ ಹೊಗೆ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣ ಹಲವು ತುಂಡುಗಳಾಗಿ ಚದುರಿ ಹೋಗಿದೆ. ನೋಡನೋಡುತ್ತಿದ್ದಂತೆಯೇ ಇಡೀ ವಿಮಾನ ಬೆಂಕಿಯ ಉಂಡೆಯಾಗಿ ಮಾರ್ಪಟ್ಟು, ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತು. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ವಿಮಾನದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ವಿಮಾನದ ಅವಶೇಷಗಳು ಮತ್ತು ಪ್ರಮುಖ ದಾಖಲೆಗಳು ಅಪಘಾತ ನಡೆದ ಜಾಗದ ಸುತ್ತಮುತ್ತಲ ಹೊಲಗಳಲ್ಲಿ ಚದುರಿ ಬಿದ್ದಿದ್ದವು.
ತಾಂತ್ರಿಕ ದೋಷದ ಶಂಕೆ: ತನಿಖೆಗೆ ಆದೇಶ
ವಿಮಾನವು ಇಳಿಯುವ ಕೊನೆಯ ಹಂತದಲ್ಲಿ ಅನಿರೀಕ್ಷಿತ ತಾಂತ್ರಿಕ ವೈಫಲ್ಯಕ್ಕೆ ಒಳಗಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ರನ್‌ವೇ 11 ರ ಹೊಸ್ತಿಲಲ್ಲೇ ಈ ದುರಂತ ಸಂಭವಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಈಗಾಗಲೇ ಸ್ಥಳಕ್ಕೆ ಧಾವಿಸಿವೆ. ವಿಮಾನದ ಇಂಜಿನ್ ವಿಫಲವಾಗಿದೆಯೇ ಅಥವಾ ಪ್ರತಿಕೂಲ ಹವಾಮಾನ ಕಾರಣವೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
ಸ್ಥಳೀಯರು, ಅಗ್ನಿಶಾಮಕ ದಳ ಕಾರ್ಯಾಚರಣೆ
ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ವಿಮಾನ ನಿಲ್ದಾಣದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಾರಾಮತಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಶಿವಾಜಿ ತಾವರೆ ಅವರ ಪ್ರಕಾರ, ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣ ಸ್ಫೋಟಗೊಂಡಿದ್ದರಿಂದ ಒಳಗೆ ಇದ್ದವರಿಗೆ ಹೊರಬರಲು ಕಾಲಾವಕಾಶವೇ ಸಿಗಲಿಲ್ಲ. ಪೊಲೀಸರು ಸದ್ಯ ಇಡೀ ಪ್ರದೇಶವನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ : ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ ದುರ್ಮರಣ!


















