ಬಾರಾಮತಿ: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಕಸ್ಮಿಕ ನಿಧನವು ಇಡೀ ರಾಜ್ಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಆದರೆ ಅವರ ಸಾವಿನ ಬೆನ್ನಲ್ಲೇ ಒಂದು ಭಾವುಕ ಮತ್ತು ರಾಜಕೀಯ ಮಹತ್ವದ ವಿಷಯವೊಂದು ಹೊರಬಿದ್ದಿದೆ. ಒಡೆದು ಹೋಗಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳನ್ನು ಮತ್ತೆ ಒಂದುಗೂಡಿಸಿ, ತಮ್ಮ ರಾಜಕೀಯ ಗುರು ಹಾಗೂ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ಹುಟ್ಟುಹಬ್ಬದ ವಿಶೇಷ ಉಡುಗೊರೆ ನೀಡಲು ಅಜಿತ್ ದಾದಾ ಬಯಸಿದ್ದರು ಎಂಬ ವಿಷಯ ಈಗ ಬಹಿರಂಗವಾಗಿದೆ.
ಚಿಕ್ಕಪ್ಪನಿಗಾಗಿ ಒಂದಾಗುವ ತುಡಿತ
ಎನ್‌ಸಿಪಿ (ಎಸ್ಪಿ) ನಾಯಕ ಅಂಕುಶ್ ಕಾಕಡೆ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕಳೆದ ಡಿಸೆಂಬರ್ 12 ರಂದು ಶರದ್ ಪವಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಎರಡೂ ಬಣಗಳನ್ನು ವಿಲೀನಗೊಳಿಸಲು ಅಜಿತ್ ಪವಾರ್ ಯೋಜನೆ ರೂಪಿಸಿದ್ದರು. “ಸಾಹೇಬರ (ಶರದ್ ಪವಾರ್) ಜೊತೆ ನಿಮಗೆ ಉತ್ತಮ ಸಂಬಂಧವಿದೆ, ದಯವಿಟ್ಟು ಅವರೊಂದಿಗೆ ಮಾತನಾಡಿ. ಎರಡೂ ಬಣಗಳು ಮತ್ತೆ ಒಂದಾಗುವಂತೆ ನೋಡಿಕೊಳ್ಳಿ” ಎಂದು ಅಜಿತ್ ಪವಾರ್ ಅವರು ಹಿರಿಯ ನಾಯಕರಾದ ವಿಠ್ಠಲ್ ಶೇಠ್ ಮಣಿಯಾರ್ ಮತ್ತು ಶ್ರೀನಿವಾಸ್ ಪಾಟೀಲ್ ಅವರಲ್ಲಿ ವಿನಂತಿಸಿಕೊಂಡಿದ್ದರು ಎನ್ನಲಾಗಿದೆ. ದುರದೃಷ್ಟವಶಾತ್, ಡಿಸೆಂಬರ್‌ನಲ್ಲಿ ಅದು ಸಾಧ್ಯವಾಗದಿದ್ದರೂ, ಮುಂಬರುವ ಚುನಾವಣೆಗಳ ನಂತರ ಖಂಡಿತವಾಗಿಯೂ ಒಂದಾಗೋಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಕೊನೆಯ ದಿನಗಳಲ್ಲಿ ಸರಣಿ ಸಭೆಗಳು
ಕೇವಲ ಆಸೆ ಮಾತ್ರವಲ್ಲದೆ, ಪಕ್ಷದ ಒಗ್ಗೂಡುವಿಕೆಗಾಗಿ ಅಜಿತ್ ಪವಾರ್ ಕಳೆದ ಕೆಲವು ದಿನಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಎನ್‌ಸಿಪಿ (ಎಸ್ಪಿ) ನಾಯಕ ಜಯಂತ್ ಪಾಟೀಲ್ ಅವರ ಪ್ರಕಾರ, ಜನವರಿ 16 ರಂದು ಅವರ ನಿವಾಸದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. ಜನವರಿ 17 ರಂದು ಅಜಿತ್ ಪವಾರ್ ಅವರು ಗೋವಿಂದ್ ಬಾಗ್‌ನಲ್ಲಿರುವ ಶರದ್ ಪವಾರ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮೈತ್ರಿಯೊಂದಿಗೆ ಎದುರಿಸಿ, ನಂತರ ವಿಲೀನದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಉಭಯ ನಾಯಕರು ಸಮ್ಮತಿಸಿದ್ದರು ಎನ್ನಲಾಗಿದೆ. ಆದರೆ ಆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ವಿಧಿಯಾಟ ಬೇರೆಯೇ ಆಗಿತ್ತು.
ಉತ್ತರಾಧಿಕಾರಿ ಯಾರು?
ಅಜಿತ್ ಪವಾರ್ ಅವರ ನಿಧನದ ನಂತರ ಅವರ ರಾಜಕೀಯ ಪರಂಪರೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಮೂಡಿದ್ದು, ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರ ಹೆಸರನ್ನು ಕಾರ್ಯಕರ್ತರು ಮುನ್ನೆಲೆಗೆ ತರುತ್ತಿದ್ದರೆ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗದಿದ್ದರೆ ಪ್ರಫುಲ್ ಪಟೇಲ್ ಅವರಿಗೆ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಸದ್ಯ ಅಜಿತ್ ಪವಾರ್ ಅವರ ನಿಧನದ ಹಿನ್ನೆಲೆಯಲ್ಲಿ ಎನ್‌ಸಿಪಿ ತನ್ನ ಎಲ್ಲಾ ಬೃಹತ್ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಕೇವಲ ಮನೆ ಮನೆಗೆ ಕರಪತ್ರಗಳನ್ನು ಹಂಚುವ ಮೂಲಕ ಸರಳ ಪ್ರಚಾರಕ್ಕೆ ಸೀಮಿತವಾಗಿದೆ.
ಇದನ್ನೂ ಓದಿ : ಶಬರಿಮಲೆ ಚಿನ್ನ ಕಳವು ಪ್ರಕರಣ | ಎಸ್ಐಟಿಯಿಂದ ಬಹುಭಾಷಾ ನಟ ಜಯರಾಮ್ ವಿಚಾರಣೆ



















