ಬೆಂಗಳೂರು: ದೇಶದ ಸಶಸ್ತ್ರ ಪಡೆಗಳಲ್ಲಿ ಮಕ್ಕಳು ಕೆಲಸ ಮಾಡಬೇಕು, ದೇಶ ಸೇವೆ ಮಾಡಬೇಕು ಎಂದು ಮಕ್ಕಳ ಪೋಷಕರು ಬಯಸುತ್ತಾರೆ. ಹಾಗೆಯೇ, ಸೈನಿಕ ಶಾಲೆಗಳಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿ ವಿವಿಧ ಮಿಲಿಟರಿ ಸಂಬಂಧಿತ ಸಂಸ್ಥೆಗಳ ಪ್ರವೇಶಕ್ಕಾಗಿ ಅಗತ್ಯ ಕೌಶಲಗಳನ್ನು ವೃದ್ಧಿಸಲಾಗುತ್ತದೆ. ಹಾಗೆಯೇ, ಮಕ್ಕಳಲ್ಲಿ ಶಿಸ್ತು, ನಾಯಕತ್ವದ ಗುಣಗಳನ್ನು ಬೆಳೆಸಲಾಗುತ್ತದೆ. ಇದೇ ಕಾರಣಕ್ಕಾಗಿ ಲಕ್ಷಾಂತರ ಪೋಷಕರು ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಲು ಬಯಸುತ್ತಾರೆ. ಅಂತಹ ಪೋಷಕರು ಹಾಗೂ ಮಕ್ಕಳಿಗೆ ಈಗ ಸಿಹಿ ಸುದ್ದಿ ದೊರೆತಿದೆ. 2026-27ನೇ ಸಾಲಿನಲ್ಲಿ ಸೈನಿಕ ಶಾಲೆಯ ಪ್ರವೇಶಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಈಗ ಆರಂಭವಾಗಿದೆ.
ಹೌದು, 2026-27ನೇ ಶೈಕ್ಷಣಿಕ ವರ್ಷದಲ್ಲಿ ಸೈನಿಕ ಶಾಲೆಗೆ 6 ಮತ್ತು 9ನೇ ತರಗತಿಗೆ ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅಖಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ (AISSEE 2026) ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ನೋಂದಣಿ ಆರಂಭಿಸಿದೆ. ಅಕ್ಟೋಬರ್ 10ರಿಂದಲೇ ರಿಜಿಸ್ಟ್ರೇಷನ್ ಆರಂಭವಾಗಿದೆ. ಅಕ್ಟೋಬರ್ 30 ನೋಂದಣಿಗೆ ಕೊನೆಯ ದಿನವಾಗಿದೆ.
ಅರ್ಹತೆಗಳು ಏನೇನು?
6ನೇ ತರಗತಿಗೆ ಪ್ರವೇಶಾತಿ ಪಡೆಯಲು ಬಯಸುವವರು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು 10-12 ವರ್ಷದೊಳಗಿನವರಾಗಿರಬೇಕು. ಹಾಗೆಯೇ, 9ನೇ ತರಗತಿಗೆ ಪ್ರವೇಶಾತಿ ಬಯಸುವವರು 8ನೇ ತರಗತಿ ವ್ಯಾಸಂಗ ಅಥವಾ ಉತ್ತೀರ್ಣರಾಗಿರಬೇಕು. ಇವರು 13-15 ವರ್ಷದೊಳಗಿನವರಾಗಿರಬೇಕು.
ಅರ್ಜಿ ಸಲ್ಲಿಸುವ ಜನರಲ್, ಒಬಿಸಿ ಅಭ್ಯರ್ಥಿಗಳಿಗೆ 850 ರೂಪಾಯಿ ಅರ್ಜಿ ಶುಲ್ಕವಿರುತ್ತದೆ. ಎಸ್ಸಿ, ಎಸ್ಟಿಯವರಿಗೆ 700 ರೂಪಾಯಿ ಅರ್ಜಿ ಶುಲ್ಕವಿದೆ. ಪ್ರವೇಶ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಮೆರಿಟ್ ಲಿಸ್ಟ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 2026ರ ಜನವರಿಯಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತದೆ. ಆಸಕ್ತ ವಿದ್ಯಾರ್ಥಿಗಳು https://exams.nta.nic.in/sainik-school-society/ ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಭಾರತದಲ್ಲಿ ಒಟ್ಟು 33 ಸೈನಿಕ ಶಾಲೆಗಳಿವೆ. ಕರ್ನಾಟಕದಲ್ಲಿ ವಿಜಯಪುರ, ಕೊಡಗು, ಬೆಳಗಾವಿ, ಮೈಸೂರು ಹಾಗೂ ಬೀದರ್ ನಲ್ಲಿ ಸೈನಿಕ ಶಾಲೆಗಳಿವೆ. ತವರು ರಾಜ್ಯದ ಅಭ್ಯರ್ಥಿಗಳಿಗೆ ಸೈನಿಕ ಶಾಲೆ ಪ್ರವೇಶಿಸಲು ಶೇ.67ರಷ್ಟು ಮೀಸಲಾತಿ ಇರುತ್ತದೆ. ಉಳಿದವರಿಗೆ ಶೇ.33ರಷ್ಟು ಸೀಟುಗಳು ಮೀಸಲಾಗಿರುತ್ತವೆ.