ನವದೆಹಲಿ: ಬಾಲಿವುಡ್ ತಾರಾ ದಂಪತಿಯಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಡೀಪ್‌ಫೇಕ್ ವಿಡಿಯೋಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಯೂಟ್ಯೂಬ್ ಮತ್ತು ಅದರ ಮಾತೃಸಂಸ್ಥೆ ಗೂಗಲ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಐಶ್-ಅಭಿಷೇಕ್ ಮೊಕದ್ದಮೆ ಹೂಡಿದ್ದು, 4 ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಅರ್ಜಿಯಲ್ಲಿ, ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ವಿಡಿಯೋಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಮತ್ತು ನಿಷೇಧಿಸುವಂತೆ ದಂಪತಿ ಕೋರಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ವಿಡಿಯೋಗಳನ್ನು ಪ್ರತಿಸ್ಪರ್ಧಿ ಎಐ ಮಾದರಿಗಳಿಗೆ ತರಬೇತಿ ನೀಡಲು ಬಳಸುವುದನ್ನು ತಡೆಯಲು ಯೂಟ್ಯೂಬ್ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಅತ್ಯಂತ ಅಸಹ್ಯಕರ” ಮತ್ತು “ಲೈಂಗಿಕವಾಗಿ ಅಸಭ್ಯ” ಎಂದು ಬಣ್ಣಿಸಲಾದ ಎಐ-ನಿರ್ಮಿತ ವಿಷಯವನ್ನು ಈ ಮೊಕದ್ದಮೆಯು ಗುರಿಯಾಗಿಸಿಕೊಂಡಿದೆ. ತಮ್ಮ ಹೆಸರು, ಧ್ವನಿ ಅಥವಾ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ವಸ್ತುವನ್ನು ಎಐ ಬಳಸದಂತೆ ಯೂಟ್ಯೂಬ್ ರಕ್ಷಣಾತ್ಮಕ ಕ್ರಮಗಳನ್ನು ಪರಿಚಯಿಸಬೇಕು ಎಂದು ಬಚ್ಚನ್ ದಂಪತಿ ವಾದಿಸಿದ್ದಾರೆ.
“ವಿವಾದಿತ ಯೂಟ್ಯೂಬ್ ಚಾನೆಲ್”
ಅರ್ಜಿಯಲ್ಲಿ ‘ಎಐ ಬಾಲಿವುಡ್ ಇಶ್ಕ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಚಾನೆಲ್‌ನಲ್ಲಿ 259ಕ್ಕೂ ಹೆಚ್ಚು ತಿರುಚಿದ ವಿಡಿಯೋಗಳಿದ್ದು, ಇದುವರೆಗೆ 16.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಒಂದು ವಿಡಿಯೋದಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಈಜುಕೊಳದಲ್ಲಿ ಇರುವಂತೆ ತೋರಿಸಲಾಗಿದೆ.
ಮತ್ತೊಂದು ವಿಡಿಯೋದಲ್ಲಿ, ನಟಿಯೊಬ್ಬರನ್ನು ಇದ್ದಕ್ಕಿದ್ದಂತೆ ಚುಂಬಿಸುವಂತೆ ಅಥವಾ ಪತ್ನಿಯ ಎಐ-ಬದಲಾಯಿಸಿದ ದೃಶ್ಯಗಳಿಗೆ ಕೋಪದಿಂದ ಪ್ರತಿಕ್ರಿಯಿಸುವಂತೆ ಅಭಿಷೇಕ್ ಬಚ್ಚನ್ ಅವರನ್ನು ಚಿತ್ರಿಸಲಾಗಿದೆ.
“ಎಐ ತರಬೇತಿಯ ಅಪಾಯ”
ಇಂತಹ ವಿಷಯಗಳನ್ನು ಎಐ ಮಾದರಿಗಳಿಗೆ ತರಬೇತಿ ನೀಡಲು ಬಳಸುವುದರಿಂದ, ನಕಲಿ ವಿಡಿಯೋಗಳ ಹರಡುವಿಕೆ ಇನ್ನಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. “ಒಮ್ಮೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಷಯವನ್ನು ಸಾರ್ವಜನಿಕರು ವೀಕ್ಷಿಸುವುದಲ್ಲದೆ, ಅದನ್ನು ಎಐ ತರಬೇತಿಗೂ ಬಳಸಿಕೊಂಡರೆ, ಉಲ್ಲಂಘನೆಯ ಪ್ರಕರಣಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ” ಎಂದು ಅವರು ವಾದಿಸಿದ್ದಾರೆ.
ಭಾರತದಲ್ಲಿ ಅಮೆರಿಕದಂತಹ ಕೆಲವು ದೇಶಗಳಲ್ಲಿರುವಂತೆ “ವ್ಯಕ್ತಿತ್ವದ ಹಕ್ಕುಗಳನ್ನು” ರಕ್ಷಿಸಲು ನಿರ್ದಿಷ್ಟ ಕಾನೂನುಗಳಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲ ಬಾಲಿವುಡ್ ತಾರೆಯರು ಈ ಹಕ್ಕುಗಳಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ, ಕೃತಕ ಬುದ್ಧಿಮತ್ತೆ ಮತ್ತು ಖಾಸಗಿತನದ ಹಕ್ಕುಗಳಿಗೆ ಸಂಬಂಧಿಸಿದಂತೆ ಬಚ್ಚನ್ ದಂಪತಿಯ ಈ ಪ್ರಕರಣವು ನಮ್ಮ ದೇಶದಲ್ಲಿ ಅತ್ಯಂತ ಮಹತ್ವ ಪಡೆದಿದೆ.