ನವದೆಹಲಿ: ದೆಹಲಿಯಲ್ಲಿ ಮತ್ತೊಮ್ಮೆ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು, ಜನರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ.
ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಬುಧವಾರ ಎಕ್ಯೂಐ ಸೂಚ್ಯಂಕ 418ಕ್ಕೆ ತಲುಪಿದೆ. ಇದು ಈ ವರ್ಷದಲ್ಲಿ ಅತೀ ಹೆಚ್ಚು ಕಳಪೆ ದಾಖಲೆಯಾಗಿರುವ ಸೂಚ್ಯಂಕವಾಗಿದೆ. ಮಂಗಳವಾರ 334 ರಷ್ಟಿದ್ದ ಎಕ್ಯೂ ಐ, ಬುಧವಾರ 418ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿನ 36 ಪರಿವೀಕ್ಷಣಾ ಕೇಂದ್ರಗಳ ಪೈಕಿ, 30 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ದಾಖಲಾಗಿದೆ ಎಂದು ಸಿಪಿಸಿಬಿ ತಿಳಿಸಿದೆ. ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ಅದನ್ನು ಉತ್ತಮ ಎನ್ನಲಾಗುತ್ತದೆ. 51ರಿಂದ 100 ರಷ್ಟಿದ್ದರೆ ‘ಸಮಾಧಾನಕರ’ವಾದ ವಾತಾವರಣ ಇದ್ದಂತೆ 101 ರಿಂದ 200 ರಷ್ಟಿದ್ದರೆ ಅದು ಸಾಧಾರಣ ವಾತಾವರಣ. 201 ರಿಂದ 300 ರಷ್ಟಿದ್ದರೆ ‘ಕಳಪೆ’ ಹಾಗೂ 301 ರಿಂದ 400 ರಷ್ಟಿದ್ದರೆ ‘ಅತ್ಯಂತ ಕಳಪೆ’ ಎನ್ನಲಾಗುತ್ತದೆ. ಆದರೆ, ದೆಹಲಿಯ ವಾತಾವರಣ ಅತ್ಯಂತ ಕಳಪೆಯಾಗಿದೆ. ಅಲ್ಲದೇ ಒಂದೊಂದು ಬಾರಿ ಅದು 400ರ ಗಡಿ ದಾಟುತ್ತಿರುವುದು ಅತ್ಯಂತ ಅಪಾಯಕಾರಿಯ ಸ್ಥಿತಿ ಎದುರಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಿದೆ.