ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಆತಂಕಕಾರಿಯಾಗಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ಒಣ ಹವೆ ಹಾಗೂ ವಾಹನಗಳ ದಟ್ಟಣೆಯಿಂದಾಗಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ‘ಅನಾರೋಗ್ಯಕರ’ ಹಂತಕ್ಕೆ ತಲುಪಿದೆ.
ನಗರದ ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಮತ್ತು ಜಯನಗರ ಭಾಗಗಳಲ್ಲಿ AQI 160 ದಾಟಿರುವುದು ದಾಖಲಾಗಿದೆ. ಇದು ಶ್ವಾಸಕೋಶದ ಸಮಸ್ಯೆ ಇರುವವರು, ವೃದ್ಧರು ಹಾಗೂ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅತಿಸೂಕ್ಷ್ಮ ಕಣಗಳಾದ PM 2.5 ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ.
ವೈದ್ಯರು ನೀಡಿರುವ ಸಲಹೆಯಂತೆ, ಬೆಂಗಳೂರು ನಿವಾಸಿಗಳು ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹೊರಾಂಗಣ ವ್ಯಾಯಾಮವನ್ನು ತಪ್ಪಿಸುವುದು ಒಳಿತು. ಹೊರಗೆ ತೆರಳುವಾಗ ಮಾಸ್ಕ್ ಧರಿಸುವುದು ಹಾಗೂ ಅನಾವಶ್ಯಕ ಸಂಚಾರವನ್ನು ಕಡಿಮೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.
ಇನ್ನೊಂದೆಡೆ, ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. ಮೈಸೂರು ಮತ್ತು ಮಂಗಳೂರು ಭಾಗಗಳಲ್ಲಿ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದ್ದು, ಹೊರಾಂಗಣ ಚಟುವಟಿಕೆಗಳಿಗೆ ಪೂರಕವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ AQI 65 ದಾಖಲಾಗಿದ್ದು, ‘ಉತ್ತಮ’ ಶ್ರೇಣಿಯಲ್ಲಿ ಇದೆ. ಉಡುಪಿಯಲ್ಲಿ AQI 100ರ ಗಡಿ ದಾಟಿರುವುದರಿಂದ ಅತಿ ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಕಲಬುರ್ಗಿ, ವಿಜಯಪುರ ಮತ್ತು ಬೆಳಗಾವಿಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ಗಾಳಿಯ ಗುಣಮಟ್ಟ 100ಕ್ಕಿಂತ ಕೆಳಮಟ್ಟದಲ್ಲಿರುವುದು ಸಮಾಧಾನಕರ ಸಂಗತಿಯಾಗಿದೆ. ಧೂಳಿನ ಅಲರ್ಜಿ ಅಥವಾ ಉಸಿರಾಟದ ಸಮಸ್ಯೆ ಇರುವವರು ಮಧ್ಯಾಹ್ನದ ವೇಳೆ ರಸ್ತೆಬದಿಯ ಸಂಚಾರವನ್ನು ಕಡಿಮೆ ಮಾಡುವುದು ಒಳಿತು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+



















