ನವದೆಹಲಿ: ವಿಮಾನ ಪ್ರಯಾಣಿಕರು ಇನ್ನು ಮುಂದೆ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಬಹುದಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಟಿಕೆಟ್ ಮರುಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದು, ಈ ಪೈಕಿ ಇದು ಕೂಡ ಒಂದು.
ಪ್ರಯಾಣಿಕ ಸ್ನೇಹಿ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವ ಡಿಜಿಸಿಎ, ಹಲವು ಹೊಸ ಪ್ರಸ್ತಾವನೆಗಳನ್ನು ಮುಂದಿಟ್ಟಿದೆ. ಇದರ ಪ್ರಕಾರ, ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕ್ ಮಾಡಿದ ನಂತರ 48 ಗಂಟೆಗಳ ಕಾಲ ‘ಲುಕ್-ಇನ್’ ಆಯ್ಕೆಯನ್ನು ಒದಗಿಸಬೇಕು. ಈ ಅವಧಿಯಲ್ಲಿ ಪ್ರಯಾಣಿಕರು ಯಾವುದೇ ಹೆಚ್ಚುವರಿ ದಂಡವಿಲ್ಲದೆ ಟಿಕೆಟ್ ರದ್ದುಗೊಳಿಸಬಹುದು ಅಥವಾ ದಿನಾಂಕ ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಬದಲಾದ ಟಿಕೆಟ್‌ನ ದರದಲ್ಲಿ ವ್ಯತ್ಯಾಸವಿದ್ದರೆ ಅದನ್ನು ಪಾವತಿಸಬೇಕಾಗುತ್ತದೆ.
ಆದಾಗ್ಯೂ, ಈ ಸೌಲಭ್ಯಕ್ಕೆ ಕೆಲವು ಷರತ್ತುಗಳಿವೆ. ದೇಶೀಯ ವಿಮಾನ ಪ್ರಯಾಣಕ್ಕೆ 5 ದಿನಗಳಿಗಿಂತ ಕಡಿಮೆ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ 15 ದಿನಗಳಿಗಿಂತ ಕಡಿಮೆ ಅವಧಿ ಇರುವಾಗ ಬುಕ್ ಮಾಡಿದ ಟಿಕೆಟ್‌ಗಳಿಗೆ ಈ 48 ಗಂಟೆಗಳ ನಿಯಮ ಅನ್ವಯವಾಗುವುದಿಲ್ಲ.
ಇದಲ್ಲದೆ, ಏರ್‌ಲೈನ್‌ನ ವೆಬ್‌ಸೈಟ್‌ನಲ್ಲಿ ನೇರವಾಗಿ ಟಿಕೆಟ್ ಬುಕ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರ ಹೆಸರಿನಲ್ಲಿನ ಸಣ್ಣ ತಪ್ಪುಗಳನ್ನು ಸರಿಪಡಿಸಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು ಎಂದೂ ಡಿಜಿಸಿಎ ಪ್ರಸ್ತಾಪಿಸಿದೆ.
ಟ್ರಾವೆಲ್ ಏಜೆಂಟ್ ಅಥವಾ ಪೋರ್ಟಲ್‌ಗಳ ಮೂಲಕ ಟಿಕೆಟ್ ಖರೀದಿಸಿದರೂ, ಮರುಪಾವತಿಯ ಸಂಪೂರ್ಣ ಜವಾಬ್ದಾರಿ ವಿಮಾನಯಾನ ಸಂಸ್ಥೆಗಳ ಮೇಲೆಯೇ ಇರುತ್ತದೆ. ಏಕೆಂದರೆ ಏಜೆಂಟರು ಅವರ ನೇಮಕಗೊಂಡ ಪ್ರತಿನಿಧಿಗಳಾಗಿರುತ್ತಾರೆ. ಯಾವುದೇ ಸಂದರ್ಭದಲ್ಲಿ, ಟಿಕೆಟ್ ರದ್ದತಿಯಾದ 21 ದಿನಗಳೊಳಗೆ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿಯಂತ್ರಕ ಸಂಸ್ಥೆ ಸ್ಪಷ್ಟಪಡಿಸಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯಂತಹ ಕಾರಣಗಳಿಂದ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದರೆ, ಅವರಿಗೆ ಮರುಪಾವತಿ ಅಥವಾ ಕ್ರೆಡಿಟ್ ಶೆಲ್ ನೀಡುವ ಬಗ್ಗೆಯೂ ಏರ್‌ಲೈನ್‌ಗಳು ಪರಿಗಣಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಈ ಕರಡು ನಿಯಮಗಳ ಕುರಿತು ನವೆಂಬರ್ 30ರವರೆಗೆ ಸಾರ್ವಜನಿಕರು ಮತ್ತು ಸಂಬಂಧಪಟ್ಟವರಿಂದ ಸಲಹೆ, ಆಕ್ಷೇಪಣೆಗಳನ್ನು ಡಿಜಿಸಿಎ ಆಹ್ವಾನಿಸಿದೆ.



















