ಮುಂಬೈ: ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಬೆದರಿಕೆ ಪತ್ರವೊಂದು ಪತ್ತೆಯಾದ ಕಾರಣ ವಿಮಾನವು ಮಧ್ಯದಿಂದಲೇ ವಾಪಸ್ ಬಂದ ಘಟನೆ ಸೋಮವಾರ ನಡೆದಿದೆ. ಎಐ 119 ವಿಮಾನವು ಸೋಮವಾರ ಬೆಳಗ್ಗೆ 10.25 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ವಿಮಾನದ ಒಂದು ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎನ್ನಲಾಗಿದೆ. ಸೋಮವಾರ ನ್ಯೂಯಾರ್ಕ್‌ಗೆ ಹೊರಟಿದ್ದ ಮುಂಬೈ-ನ್ಯೂಯಾರ್ಕ್ (ಜೆಎಫ್‌ಕೆ) ಎಐ 119 ವಿಮಾನದಲ್ಲಿ ಸಂಭಾವ್ಯ ಭದ್ರತಾ ಬೆದರಿಕೆ ಉಂಟಾಗಿದ್ದರಿಂದ, ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ, ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮುಂಬೈಗೆ ಮರಳಿ ವಿಮಾನವನ್ನು ಇಳಿಸಲಾಯಿತು. ಸ್ಥಳೀಯ ಕಾಲಮಾನ 10.25ಕ್ಕೆ ವಿಮಾನ ಸುರಕ್ಷಿತವಾಗಿ ಮುಂಬೈಗೆ ಬಂದಿಳಿದಿದೆ. ವಿಮಾನವನ್ನು ಭದ್ರತಾ ಸಂಸ್ಥೆಗಳು ಕಡ್ಡಾಯ ತಪಾಸಣೆಗೆ ಒಳಪಡಿಸುತ್ತಿವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಈ ವಿಮಾನವು ಮಂಗಳವಾರ ಬೆಳಗ್ಗೆ 5 ಗಂಟೆಗೆ ಮತ್ತೆ ನ್ಯೂಯಾರ್ಕ್ ಕಡೆಗೆ ಸಂಚಾರ ಪುನಾರಂಭಿಸಲಿದೆ. ಅಲ್ಲಿಯವರೆಗೆ ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ವಸತಿ, ಊಟ ಮತ್ತು ಇತರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಭದ್ರತಾ ಸಂಸ್ಥೆಗಳು ಪ್ರಸ್ತುತ ವಿಮಾನವನ್ನು ಪರಿಶೀಲಿಸುತ್ತಿದ್ದು, ಬೆದರಿಕೆಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.