ರಾಮನಗರ: ರಾಮನಗರ ಹಾಗೂ ಚನ್ನಪಟ್ಟಣವನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರೀತಿ ಮಾಡುವ ಗುರಿ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆದರೆ, ನನ್ನ ಪಕ್ಷ ಸ್ವಂತ ಬಲದಿಂದ ಅಧಿಕಾರ ನಡೆಸಬೇಕೆಂಬ ಆಸೆ ಇದೆ. ಛಲ ಇದೆ ಎಂದಿದ್ದಾರೆ.
14 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನಂತರ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ನನ್ನ ಮುಗಿಸಿದೆ ಎಂದು ಮಾತನಾಡುತ್ತಿದ್ದ ವೈರಿಗಳ ಮುಂದೆಯೇ ಈಗ ಪ್ರಧಾನಿ ಮೋದಿ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ. ನನ್ನ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ. ವಿಶಾಖಪಟ್ಟಣಂನಲ್ಲಿ ಮುಚ್ಚಿ ಹೋಗಿದ್ದ ಕಾರ್ಖಾನೆ ಪುನರಾರಂಭಿಸಿದ್ದೇನೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರನ್ನು ನಂಬಬೇಡಿ. ರಾಮಲಿಂಗಾರೆಡ್ಡಿ, ಮಾಗಡಿ ಶಾಸಕರೂ ಬರುತ್ತಿದ್ದಾರೆ. ಕಾಂಗ್ರೆಸ್ನವರನ್ನು ನಂಬಬೇಡಿ ಕೈಜೋಡಿಸಿ ಮನವಿ ಮಾಡುತ್ತೇನೆ. ಜನರನ್ನು ಆರ್ಥಿಕವಾಗಿ ಬೆಳೆಸುವ ಬದ್ಧತೆ ಕಾಂಗ್ರೆಸ್ಗೆ ಇಲ್ಲ ಎಂದು ಆರೋಪಿಸಿದ್ದಾರೆ.
ನನಗೆ ದೇವರು ಮೂರು ಬಾರಿ ಮರು ಜನ್ಮ ನೀಡಿದ್ದಾನೆ. ನಾನು ಯಾರಿಗೂ ಹೆದರಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ ಎಂದು ಹೇಳಿದ್ದಾರೆ.