ನವದೆಹಲಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಎಐಸಿಸಿ ಕೆಂಡಾಮಂಡಲವಾಗಿದೆ.
ಸಿಎಂ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನ ನೀಡಲಾಗಿದೆ ಎಂಬ ಆರೋಪ ಈಗ ದೊಡ್ಡ ರಾಜಕೀಯ ಹೊಡೆದಾಟಕ್ಕೆ ಕಾರಣವಾಗಿದೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸದ್ಯ ಹೈಕೋರ್ಟ್ ಸಿಎಂಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ನಿಗದಿ ಪಡಿಸಿದೆ. ಈ ಮಧ್ಯೆಯೂ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ. ಈಗ ರಾಜ್ಯಪಾಲರ ನಡೆ ವಿರುದ್ಧ ಸಮರ ಸಾರಿದ್ದಾರೆ. ಕಾಂಗ್ರೆಸ್ ಹೋರಾಟಕ್ಕೆ ಹೈಕಮಾಂಡ್ ಬಲವೂ ಸಿಕ್ಕಿದೆ.
ರಾಜ್ಯಪಾಲರ ವಿರುದ್ಧ ಸಮರಕ್ಕೆ ನಿಂತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಮುಂದೆ ದಾಖಲೆ ಸಮೇತ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್ ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ.
ಬಿಜೆಪಿ ಏನೇ ಆರೋಪ ಮಾಡಿದರೂ ತಿರುಗೇಟು ನೀಡಿ, ಕಾನೂನು ಹೋರಾಟದ ಮೂಲಕವೇ ಉತ್ತರ ಕೊಡಿ ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಸುಪ್ರೀಂಕೋರ್ಟ್ ಆದರೂ ಪರವಾಗಿಲ್ಲ ಕಾನೂನು ಹೋರಾಟ ಮುಂದುವರೆಸಿ ಎಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ, ಗ್ಯಾರಂಟಿಯನ್ನೇ ಅಸ್ತ್ರಮಾಡಿಕೊಂಡು, ಗ್ಯಾರಂಟಿ ಸಹಿಸದೇ ಸಿಎಂ ವಿರುದ್ಧ ಬಿಜೆಪಿ ಆರೋಪಿಸುತ್ತಿದೆ ಎಂದು ಹೇಳಿಕೆಗಳನ್ನು ನೀಡುವಂತೆ ರಾಜ್ಯ ನಾಯಕರಿಗೆ ಸಲಹೆ ನೀಡಲಾಗಿದೆ.
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ವಿರುದ್ಧ ಮೋದಿ, ಶಾ ಷಡ್ಯಂತ್ರ ಮಾಡುತ್ತಿದ್ದಾರೆ, ರಾಜ್ಯಪಾಲರ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಹೊರಟಿದ್ದಾರೆ. ಹೀಗಂತಾ ಬಿಜೆಪಿ-ಜೆಡಿಎಸ್ ನಾಯಕರಿಗೆ ತಿರುಗೇಟು ನೀಡುವಂತೆ ಹೈಕಮಾಂಡ್ ನಾಯಕರು ಹೇಳಿದ್ದಾರೆ. ಹೆಜ್ಜೆ ಹೆಜ್ಜೆ ರಾಜ್ಯಪಾಲರ ನಡೆ ಖಂಡಿಸಿ ಹೇಳಿಕೆಗಳನ್ನು ನೀಡಿ ಎಂದು ಹೋರಾಟಕ್ಕೆ ಕರೆ ನೀಡಿದ್ದಾರೆ.