ಬೆಂಗಳೂರು: ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್, ಚಾರ್ಟರ್, ಗೂಗಲ್, ಆ್ಯಪಲ್, ಇನ್ಫೋಸಿಸ್, ಟಿಸಿಎಸ್ ಸೇರಿ ಜಾಗತಿಕ ಮಟ್ಟದ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಅದರಲ್ಲೂ, ಎಐ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆಲ್ಲ ಮನುಷ್ಯನ ಉದ್ಯೋಗಕ್ಕೆ ಸಂಚಕಾರ ಬರುತ್ತಿದೆ. ಹಾಗಾಗಿ, ಉದ್ಯೋಗಿಗಳು, ಮುಂದಿನ ದಿನಗಳಲ್ಲಿ ಕೆಲಸಕ್ಕೆ ಸೇರುವವರಿಗೆ ಎಐ ತಂತ್ರಜ್ಞಾನದ ಬಳಕೆ, ಅದನ್ನು ಬಳಸಿಕೊಂಡೇ ಕೆಲಸದಲ್ಲಿ ದಕ್ಷತೆ ತೋರುವವರಿಗೆ ಭಾರಿ ಬೇಡಿಕೆ ಉಂಟಾಗಲಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಎಐ ಆಧಾರಿತ ಕಂಪನಿಗಳಲ್ಲಿ ಉದ್ಯೋಗಕ್ಕೆ ಬೇಡಿಕೆ ಉಂಟಾಗಿದೆ.
ಹೌದು, ಎಐ ಆಧಾರಿತ ಕೆಲಸಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಉಂಟಾಗುತ್ತಿದೆ. ಎಐ ಸ್ಕಿಲ್ ಗಳನ್ನು ಹೊಂದಿರುವವರಿಗೆ ಫ್ರೆಶರ್ಸ್ ಆದರೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಳ್ಳೆಯ ಸಂಬಳವೂ ಸಿಗುತ್ತಿದೆ. ಎಐ ಆಧಾರಿತ ಕಂಪನಿಗಳಲ್ಲಿ ಉದ್ಯೋಗಿಗಳ ನೇಮಕಾತಿಯು ಸೆಪ್ಟೆಂಬರ್ ನಲ್ಲಿ ಶೇ.11.7ರಷ್ಟು ಜಾಸ್ತಿಯಾಗಿದೆ ಎಂದು ಇಂಡೀಡ್ ಕಂಪನಿಯ ವರದಿಯೊಂದು ತಿಳಿಸಿದೆ.
ಇದಕ್ಕೂ ಮೊದಲು ಭಾರತದಲ್ಲಿ ಎಐ ಆಧಾರಿತ ಉದ್ಯೋಗಿಗಳ ಬೇಡಿಕೆ ಶೇ.8.2ರಷ್ಟಿತ್ತು. ಈಗ ಏಕಾಏಕಿ ಅದು 11.7ಕ್ಕೆ ಜಾಸ್ತಿಯಾಗಿದೆ. ಇನ್ನು, ಭಾರತದ ನಂತರ ಎಐ ಕೌಶಲಗಳುಳ್ಳ ಉದ್ಯೋಗಿಗಳಿಗೆ ಸಿಂಗಾಪುರದಲ್ಲಿಯೇ ಹೆಚ್ಚು ಬೇಡಿಕೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿರುವ ಎಂಎನ್ ಸಿಗಳು, ಐಟಿ ಕಂಪನಿಗಳೇ ಎಐ ಆಧಾರಿತ ಉದ್ಯೋಗಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆ ಎಂದು ಹೇಳಲಾಗುತ್ತಿದೆ.
ವರದಿಯ ಪ್ರಕಾರ, ಟೆಕ್ನಾಲಜಿ ಕ್ಷೇತ್ರದಲ್ಲಿಯೇ ಎಐ ಕೌಶಲ ಇರುವವರಿಗೆ ಹೆಚ್ಚಿನ ಆದ್ಯತೆ ಇದೆ. ಇನ್ನು ಡೇಟಾ ಅನಾಲಿಟಿಕ್ಸ್ ನಲ್ಲಿ ಶೇ.39ರಷ್ಟು ಬೇಡಿಕೆ ಇದೆ. ಅದೇ ರೀತಿ, ಸಾಫ್ಟ್ ವೇರ್ ಡೆವಲಪ್ ಮೆಂಟ್ ಕ್ಷೇತ್ರದಲ್ಲಿ ಶೇ.23ರಷ್ಟು ಬೇಡಿಕೆ ಇದೆ. ಹಾಗಾಗಿ, ಈಗ ಉದ್ಯೋಗದಲ್ಲಿರುವವರು, ಅಧ್ಯಯನ ಮಾಡುತ್ತಿರುವವರು, ಎಂಎನ್ ಸಿಗಳಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರು ಎಐ ಬಳಕೆ, ಸದುಪಯೋಗ, ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವುದು ಅನಿವಾರ್ಯವಾಗಿದೆ.



















