ಬೆಂಗಳೂರು: ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎಐ) ಸಂಚಲನ ಮೂಡಿಸುತ್ತಿದೆ. ಮುಂದಿನ ದಿನಗಳಲ್ಲಿ ಎಐ ಬಳಕೆ ಜಾಸ್ತಿಯಾದಂತೆಲ್ಲ ಲಕ್ಷಾಂತರ ಜನರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಆನ್ ಲೈನ್ ಡೆಲಿವರಿ ಕಂಪನಿಯಾದ ಜೊಮ್ಯಾಟೋ 500 ಉದ್ಯೋಗಿಗಳನ್ನು ಏಕಾಏಕಿ ವಜಾ (Zomato Lay Off) ಮಾಡಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಹೌದು, ಕಸ್ಟಮರ್ ಸರ್ವಿಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಕಂಪನಿ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಜೊಮ್ಯಾಟೋ ಕಂಪನಿಯು ಕಸ್ಟಮರ್ ಸರ್ವಿಸ್ ಗಾಗಿ ನಗೆಟ್ (Nugget) ಎಂಬ ಎಐ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದೇ ನಗೆಟ್ ವ್ಯವಸ್ಥೆಯಾಗಿದೆ. ಇದನ್ನು ಅಳವಡಿಸಿಕೊಂಡ ಬೆನ್ನಲ್ಲೇ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಕಸ್ಟಮರ್ ಸರ್ವಿಸ್ ಗಾಗಿ ಕಂಪನಿಯು ಜೊಮ್ಯಾಟೋ ಅಸೋಸಿಯೇಟ್ ಎಕ್ಸಲರೇಟರ್ ಪ್ರೋಗ್ರಾಮ್ (ಝೆಡ್ಎಎಪಿ) ವ್ಯವಸ್ಥೆ ಜಾರಿಗೆ ತಂದಿದೆ. ಇದಕ್ಕೆ ಕಳೆದ ವರ್ಷ 1,500 ಜನರನ್ನು ನೇಮಿಸಲಾಗಿತ್ತು. ಆದರೆ, ನಗೆಟ್ ಎಐ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಹೆಚ್ಚುವರಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ನಗೆಟ್ ಎಐ ವ್ಯವಸ್ಥೆ ಜಾರಿಯಿಂದಾಗಿ ಆಟೋಮ್ಯಾಟಿಕ್ ಆಗಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುತ್ತಿದೆ. ಅದರಲ್ಲೂ, ಶೇ.80ರಷ್ಟು ಪರಿಹಾರಗಳನ್ನು ಉದ್ಯೋಗಿಗಳ ಮಧ್ಯಸ್ಥಿಕೆ ಇಲ್ಲದೆಯೇ ನೀಡಲಾಗುತ್ತಿದೆ. ಇದೇ ಕಾರಣದಿಂದಾಗಿ ಜೊಮ್ಯಾಟೋ ಕಂಪನಿಯು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ ಎನ್ನಲಾಗಿದೆ. ಇದರಿಂದಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಉದ್ಯೋಗಿಗಳಿಗೆ ಆತಂಕ, ಭೀತಿ ಉಂಟು ಮಾಡಿದೆ. ಮುಂದೆ ಏನು ಕಾದಿದೆಯೋ ಎಂಬ ಭಯವೂ ಕಾಡುವಂತಾಗಿದೆ.