ಲಾಹೋರ್ : ಪಾಕಿಸ್ತಾನದ ಸೂಪರ್ ಲೀಗ್ ( PSL ) ಹರಾಜಿನಲ್ಲಿ ಫ್ರಾಂಚೈಸಿಗಳಿಂದ ಸತತವಾಗಿ ಕಡೆಗಣಿಸಲ್ಪಟ್ಟಿರುವ ಪಾಕ್ ಕ್ರಿಕೆಟಿಗ ಅಹ್ಮದ್ ಶೆಹಜಾದ್, ತಮ್ಮ ನೋವನ್ನು ತಡೆದುಕೊಳ್ಳಲಾಗದೆ ಲೈವ್ ಟಿವಿಯಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ.
ಒಂದು ಕಾಲದಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರನಾಗಿದ್ದ ಅಹ್ಮದ್ ಶೆಹಜಾದ್, 2020ರಿಂದೀಚೆಗೆ ಯಾವುದೇ ಪಿಎಸ್‌ಎಲ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಈ ಅವಮಾನದಿಂದ ನೊಂದು, ಅವರು ಇತ್ತೀಚೆಗೆ ಪಿಎಸ್‌ಎಲ್ ಡ್ರಾಫ್ಟ್‌ನಿಂದಲೂ ತಮ್ಮ ಹೆಸರನ್ನು ಹಿಂಪಡೆದಿದ್ದರು. ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ತಮ್ಮ ವೃತ್ತಿಜೀವನಕ್ಕೆ ಎದುರಾಗಿರುವ ಸಂಕಷ್ಟದ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದಾರೆ.
ಮಂಡಳಿ ವಿರುದ್ಧ ಆಕ್ರೋಶ
ಪಿಎಸ್‌ಎಲ್‌ನಲ್ಲಿ ತಮಗೆ ಅವಕಾಶ ಸಿಗದಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಸ್ಪಷ್ಟ ನಿಲುವೇ ಕಾರಣ ಎಂದು ಶೆಹಜಾದ್ ಆರೋಪಿಸಿದ್ದಾರೆ. “ನನ್ನ ಮೇಲೆ ನಿಷೇಧ ಹೇರಲಾಗಿದೆಯೇ ಅಥವಾ ನಾನು ನಿವೃತ್ತಿಯಾಗಿದ್ದೇನೆಯೇ ಎಂಬ ಬಗ್ಗೆ ಫ್ರಾಂಚೈಸಿಗಳಿಗೆ ಯಾವುದೇ ಸ್ಪಷ್ಟತೆ ಇಲ್ಲ. ಕೆಲವರು ನನ್ನ ಮೇಲೆ ಪಿಸಿಬಿ ಬ್ಯಾನ್ ಹೇರಿದೆ ಎಂದು ಭಾವಿಸಿದ್ದಾರೆ. ಈ ಗೊಂದಲಗಳನ್ನು ಬಗೆಹರಿಸಲು ಮಂಡಳಿ ನನ್ನೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಗನ ಆಸೆ ಈಡೇರಿಸಲಾಗದ ನೋವು
ಮಾತನಾಡುವ ಭರದಲ್ಲಿ ಗದ್ಗದಿತರಾದ ಶೆಹಜಾದ್, ತಮ್ಮ 9 ವರ್ಷದ ಮಗನ ಆಸೆಯನ್ನು ಈಡೇರಿಸಲಾಗದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟರು. “ನನ್ನ 9 ವರ್ಷದ ಮಗ ನಾನು ಕ್ರಿಕೆಟ್ ಆಡುವುದನ್ನು ನೋಡಲು ಬಯಸುತ್ತಿದ್ದಾನೆ. ನಾನು ಈ ಹಿಂದೆ ಆಡುವಾಗ ಆತ ತುಂಬಾ ಚಿಕ್ಕವನಿದ್ದ, ಹಾಗಾಗಿ ಆತನಿಗೆ ನನ್ನ ಆಟದ ನೆನಪಿಲ್ಲ. ಈಗ ಆತ ನನ್ನನ್ನು ಮೈದಾನದಲ್ಲಿ ನೋಡಲು ಬಯಸುತ್ತಿದ್ದಾನೆ, ಆದರೆ ನನಗೆ ಅವಕಾಶವೇ ಸಿಗುತ್ತಿಲ್ಲ,” ಎಂದು ಹೇಳುವಾಗ ಅವರ ಧ್ವನಿ ಕುಗ್ಗಿತ್ತು.
ಬಾಬರ್ ಅಜಂಗೆ ಹೋಲಿಕೆ
ತಮ್ಮ ಜನಪ್ರಿಯತೆಯ ಬಗ್ಗೆ ಮಾತನಾಡಿದ ಅವರು, “ಪಿಎಸ್‌ಎಲ್‌ನಲ್ಲಿ ಸುಮಾರು 500 ಆಟಗಾರರು ಆಡುತ್ತಾರೆ, ಆದರೆ ನನ್ನ ಹೆಸರಿನಲ್ಲಿ ನಡೆಯುವಷ್ಟು ಚರ್ಚೆ ಬೇರೆ ಯಾರ ಮೇಲೂ ನಡೆಯುವುದಿಲ್ಲ. ನಾನು ಲೀಗ್‌ನಲ್ಲಿ ಆಡಿದ್ದರೆ, ಬಾಬರ್ ಅಜಂ ಅವರನ್ನು ನೋಡುವಂತೆ ಜನ ನನ್ನನ್ನು ನೋಡಲು ಮುಗಿಬೀಳುತ್ತಿದ್ದರು. ದ್ವೇಷದಿಂದಲೋ ಅಥವಾ ಪ್ರೀತಿಯಿಂದಲೋ, ಜನ ನನ್ನ ಆಟ ನೋಡುತ್ತಿದ್ದರು. ಇದರಿಂದ ಲೀಗ್‌ಗೆ ಲಾಭವಾಗುತ್ತಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಸ್ವಾಭಿಮಾನದ ಕಾರಣಕ್ಕಾಗಿ ತಾವಾಗಿಯೇ ಯಾರ ಬಳಿಯೂ ಅವಕಾಶ ಕೇಳಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶೆಹಜಾದ್, ಪಿಸಿಬಿ ಮೌನ ಮುರಿದು ಮಾತನಾಡಿದರೆ ಮರಳಿ ಆಡಲು ಸಿದ್ಧ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ | ನಮ್ಮ ಮೆಟ್ರೋ ರೆಡ್ ಲೈನ್‌ಗೆ ಬ್ರೇಕ್ ಹಾಕಿದ ಕೇಂದ್ರ!



















