ಬೆಳಗಾವಿ: ಅಹಿಂದ ಮತಗಳ ಕ್ರೂಢೀಕರಣ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ನ ಗೆಲುವಿಗೆ ಕಾರಣ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಹಿಂದು- ಮುಸ್ಲಿಂ ಎಂಬ ಭಾವನೆ ದೂರ ಮಾಡಿದ್ದೇವೆ. ಅಹಿಂದ ಮತಗಳು ಚದುರದಂತೆ ನೋಡಿಕೊಂಡಿದ್ದೇವೆ. ಕಾರ್ಯಕರ್ತರ ಪರಿಶ್ರಮ ಚನ್ನಪಟ್ಟಣ, ಶಿಗ್ಗಾವಿ ಕ್ಷೇತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂಡೂರು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಬಹುದು ಎಂಬ ಭರವಸೆ ಇತ್ತು. ಆದರೆ, ನಂತರ ಮತದಾರ ಬಿಜೆಪಿಯ ಕುತಂತ್ರಕ್ಕೆ ಉತ್ತರ ನೀಡುತ್ತೇನೆ ಎಂಬ ಭರವಸೆ ಮೂಡಿತು ಎಂದಿದ್ದಾರೆ.
ನಾವು ಕ್ಷೇತ್ರದಲ್ಲಿ ಯಾವ ರೀತಿ ಚುನಾವಣೆ ಮಾಡಿದ್ದೇವೋ ಅದೇ ರೀತಿಯಲ್ಲಿ ಶಿಗ್ಗಾವಿಯಲ್ಲೂ ಚುನಾವಣೆ ಮಾಡಿದ್ದೇವೆ. ಈ ರೀತಿ ಚುನಾವಣೆಯನ್ನ ಮಾಡಿದರೆ ರಾಜ್ಯದಲ್ಲಿ ಗೆಲ್ಲುತ್ತೇವೆ. ಬೊಮ್ಮಾಯಿಗೆ ಹಿಂದೆ ಶೇ. 70ರಷ್ಟು ಅಹಿಂದ ಮತಗಳು ಹೋಗುತ್ತಿದ್ದವು. ಅವು ಈಗ ನಮಗೆ ಹರಿದು ಬಂದಿವೆ ಎಂದಿದ್ದಾರೆ.