ಧಾರವಾಡ: ರೈತರ ಜಾತ್ರೆ ಎಂದೇ ಖ್ಯಾತವಾಗಿರುವ ಧಾರವಾಡ ಕೃಷಿ ಮೇಳ ಇಂದಿನಿಂದ ನಾಲ್ಕು ದಿನಗಳ ಕಾಲ ಅಂದರೆ, ಸೆ. 24ರ ವರೆಗೆ ನಡೆಯಲಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯ (Dharwad Agriculture University)ದ ಆವರಣದಲ್ಲಿ ಈ ಕೃಷಿ ಮೇಳ ನಡೆಯಲಿದೆ. ನಾಲ್ಕು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ.. 15 ಲಕ್ಷಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆಯಿದೆ.
ಮೇಳದಲ್ಲಿ ಕೃಷಿ ವಸ್ತುಗಳ ಪ್ರದರ್ಶನ ನಡೆಯಲಿದೆ. 150 ಹೈಟೆಕ್ ಮಳಿಗೆ, 241 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್, ಭಾರಿ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಮೇಳದಲ್ಲಿ ಇರಲಿವೆ. ಹವಾಮಾನ ವೈಪರೀತ್ಯ ನಿರ್ವಹಣೆ ಸಂದರ್ಭದಲ್ಲಿ ರೈತರು ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆಗಳು ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳು, ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ, ಸಂವಾದ, ಆವಿಷ್ಕಾರಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ.
ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಮತ್ತು ಪೊಲೀಸ್ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಮೇಳದ ಮೊದಲ ದಿನ ಶನಿವಾರ ಕೃಷಿಮೇಳ ವೇದಿಕೆಯಲ್ಲಿ ಬೀಜ ಮೇಳ ಉದ್ಘಾಟನೆ ಹಾಗೂ ವಿಚಾರಗೋಷ್ಠಿ ನಡೆಯಲಿದೆ. 2ನೇ ದಿನ ಉದ್ಘಾಟನೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯ ವಿತರಿಸಲಿದ್ದಾರೆ. 3ನೇ ದಿನ ಸೋಮವಾರ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಪ್ರಗತಿಪರ ರೈತರ ಅನಿಸಿಕೆಗಳ ಕಾರ್ಯಕ್ರಮ ಇರಲಿದೆ. ಮಂಗಳವಾರ ಚರ್ಚಾಗೋಷ್ಠಿ ಹಾಗೂ ಸಮಾರೋಪ ನಡೆಯಲಿದೆ.


















