ಬೆಂಗಳೂರು: ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಬಿಗ್ ಬಾಸ್ ನ ಮಾಜಿ ಸ್ಪರ್ದಿಗಳಾದ ರಜತ್, ವಿನಯ್ ಪರಪ್ಪನ ಅಗ್ರಹಾರ ಸೇರಿದ ಬೆನ್ನಲ್ಲೇ ಈಗ ಮತ್ತೋರ್ವ ಮಾಜಿ ಸ್ಪರ್ಧಿ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಹಿಂದೂ ಸಂಘಟನೆಗಳು ಬಿಗ್ ಬಾಸ್ ನ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ವಿರುದ್ಧ ದೂರು ಸಲ್ಲಿಸಲು ಮುಂದಾಗಿವೆ.
ಇಂದು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲು ಹಿಂದೂ ಸಂಘಟನೆಗಳು ಮುಂದಾಗಿವೆ. ರಕ್ಷಕ್ ಬುಲೆಟ್, ಖಾಸಗಿ ಶೋವೊಂದರಲ್ಲಿ ನಾಡದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಅಲ್ಲದೇ, ಈ ಕಾರ್ಯಕ್ರಮ ಪ್ರಸಾರ ಮಾಡಿರುವ ಖಾಸಗಿ ಚಾನೆಲ್ ವಿರುದ್ಧವೂ ಹಿಂದೂ ಸಂಘಟನೆಗಳು ಗರಂ ಆಗಿವೆ.
ಕಾರ್ಯಕ್ರಮದಲ್ಲಿ ರಕ್ಷಕ್, ಸಹ ಸ್ಪರ್ಧಿಯನ್ನು ಹೊಗಳುವ ಭರದಲ್ಲಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾನೆ. ನಿಮ್ಮನ್ನು ನೋಡುತ್ತಿದ್ದರೆ, ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು, ಶರ್ಟ್ ಹಾಕಿಕೊಂಡು ಸ್ವಿಟ್ಜರ್ಲೆಂಡ್ ನಲ್ಲಿ ಟ್ರಿಪ್ ಹೊಡಿತಿದಾಳೆ ಅಂತ ಅನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರ್ಧಿ ರಕ್ಷಕ್ ಬುಲೆಟ್ ಹಾಗೂ ವಾಹಿನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.