ಬೀದರ್ : ಲಕ್ಕುಂಡಿಯಲ್ಲಿ ಐತಿಹಾಸಿಕ ಶಿಲೆಗಳು ಪತ್ತೆಯಾಗಿರುವ ಬೆನ್ನಲ್ಲೇ, ಬೀದರ್ ಜಿಲ್ಲೆಯಲ್ಲೂ ಪುರಾತನ ಶಿಲಾಶಾಸನಗಳು ಹಾಗೂ ಶಿಲ್ಪಕಲೆಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ. ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ಸ್ವಚ್ಛತೆ ಕಾರ್ಯ ನಡೆಸುವ ವೇಳೆ ಮಣ್ಣಿನಲ್ಲಿ ಹುದುಗಿದ್ದ ಪುರಾತನ ಕುರುಹುಗಳು ಬೆಳಕಿಗೆ ಬಂದಿವೆ.
ಸ್ವಚ್ಛತೆ ವೇಳೆ ಐದು ಹೆಡೆಯ ನಾಗರ ವಿಗ್ರಹ, ಶಿವಲಿಂಗ, ಶಿಲಾಶಾಸನ ಹಾಗೂ ಸರ್ಪ ಶಿಲ್ಪಕಲೆಗಳು ಪತ್ತೆಯಾಗಿವೆ. ಕಲ್ಲಿನಲ್ಲಿ ಕೆತ್ತಲಾದ ಐದು ಹೆಡೆಯ ನಾಗಸರ್ಪದ ವಿಗ್ರಹದ ಜೊತೆಗೆ ಪುರಾತನ ಶಿವಲಿಂಗ ಕಂಡುಬಂದಿರುವುದು ವಿಶೇಷವಾಗಿದೆ.
ಕಲ್ಯಾಣ ಚಾಲುಕ್ಯರು ಆಳಿದ್ದ ನಾಡಾಗಿರುವ ಬಸವಕಲ್ಯಾಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಐತಿಹಾಸಿಕ ಶಿಲೆಗಳು ಮಣ್ಣಿನಲ್ಲಿ ಹುದುಗಿರುವ ಶಂಕೆ ವ್ಯಕ್ತವಾಗಿದೆ. ಪತ್ತೆಯಾದ ಶಿಲೆಗಳನ್ನು ಉತ್ಖನನ ಮಾಡಿ ಸಂರಕ್ಷಿಸುವಂತೆ ಗ್ರಾಮಸ್ಥರು ಪುರಾತತ್ವ ಇಲಾಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಪೊನ್ನಂಪೇಟೆಯಲ್ಲಿ ಭವ್ಯ ಹಿಂದೂ ಸಂಗಮ ಶೋಭಾಯಾತ್ರೆ



















