ನವದೆಹಲಿ | ಪತ್ನಿಯಿಂದ ಡಿವೋರ್ಸ್ ಅರ್ಜಿ ಬಳಿಕ ನಟ ವಿಜಯ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಕರೂರು ಕಾಲ್ತುಳಿತ ಪ್ರಕರಣದಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ನಟ ವಿಜಯ್ ಅವರಿಗೆ ಸಿಬಿಐ ಮತ್ತೆ ಸಮನ್ಸ್ ನೀಡಿದೆ. ಮಾರ್ಚ್ 10, 2026 ರಂದು ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಈ ಸಮನ್ಸ್‌ನಲ್ಲಿ ತಿಳಿಸಲಾಗಿದೆ.
ಸಿಬಿಐ ಸದ್ಯ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಇದುವರೆಗೆ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ದಾಖಲೆಗಳ ಆಧಾರದ ಮೇಲೆ, ವಿಜಯ್ ಅವರಿಂದ ಇನ್ನೂ ಕೆಲವು ಸ್ಪಷ್ಟನೆಗಳನ್ನು ಪಡೆಯಲು ಸಿಬಿಐ ನಿರ್ಧರಿಸಿದೆ. ವಿಶೇಷವಾಗಿ, ಪ್ರಚಾರ ವಾಹನದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಭೆಯ ಸಮಯದಲ್ಲಿ ತೆಗೆದ 3D ಲೇಸರ್ ಮಾಪನ ವರದಿಗಳ ಆಧಾರದ ಮೇಲೆ ಅವರ ಬಳಿ ಅಡ್ಡ-ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಪ್ರಕರಣದ ಹಿನ್ನೆಲೆ |
ಕಳೆದ 2025ರ ಸೆಪ್ಟೆಂಬರ್ 27ರಂದು, ಕರೂರಿನ ವೇಲುಸ್ವಾಮಿಪುರಂನಲ್ಲಿ ನಟ ವಿಜಯ್ ಭಾಗವಹಿಸಿದ್ದ ಪಕ್ಷದ ಪ್ರಚಾರ ಸಭೆ ನಡೆದಿತ್ತು. ಸುಮಾರು 10,000 ಮಂದಿ ಮಾತ್ರ ಕೂರಬಹುದಾದ ಸ್ಥಳದಲ್ಲಿ 30,000ಕ್ಕೂ ಹೆಚ್ಚು ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿದ್ದರು. ಈ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 10 ಮಕ್ಕಳು, 18 ಮಹಿಳೆಯರು ಸೇರಿದಂತೆ ಒಟ್ಟು 41 ಮಂದಿ ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಪ್ರಕರಣದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ ಮತ್ತು ವಿಜಯ್ ತಡವಾಗಿ ಬಂದಿದ್ದೇ ಕಾಲ್ತುಳಿತಕ್ಕೆ ಮುಖ್ಯ ಕಾರಣ ಎಂದು ಆರೋಪಗಳು ಕೇಳಿಬಂದಿದ್ದವು. ತಮಿಳುನಾಡು ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ತನಿಖೆ ತೃಪ್ತಿಕರವಾಗಿಲ್ಲ ಎಂದು ಹೇಳಿ, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಿಬಿಐ ಈ ಪ್ರಕರಣವನ್ನು ತೀವ್ರವಾಗಿ ತನಿಖೆ ನಡೆಸುತ್ತಿದೆ. ಈಗಾಗಲೇ ಕಳೆದ ಜನವರಿ 12 ಮತ್ತು 19ರಂದು ವಿಜಯ್ ದೆಹಲಿಯ ಸಿಬಿಐ ಕಚೇರಿಯಲ್ಲಿ ಹಾಜರಾಗಿ ವಿವರಣೆ ನೀಡಿದ್ದರು. ಅವರ ಬಳಿ ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿತ್ತು.
ಇದನ್ನೂ ಓದಿ : ಕದ್ದ ವಾಹನಗಳನ್ನೇ ಬಳಸಿ ಮತ್ತೆ ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ!



















