ಮೈಸೂರು : ಮೈಸೂರಿನ ಹೊರವಲಯದಲ್ಲಿ ಎಗ್ಗಿಲ್ಲದೆ ಇಸ್ಪೀಟ್ (ಜೂಜಾಟ) ದಂಧೆ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಮೈಸೂರಿಗೆ ಬಂದು ಲಕ್ಷಾಂತರ ರೂಪಾಯಿ ಪಣವಾಗಿ ಹಾಕಿ ಜೂಜಾಟದಲ್ಲಿ ತೊಡಗುತ್ತಿದ್ದಾರೆ ಎನ್ನಲಾಗಿದೆ. ಈ ಅಕ್ರಮ ಚಟುವಟಿಕೆಯನ್ನು ರೌಡಿ ಶೀಟರ್‌ಗಳು ನಡೆಸುತ್ತಿದ್ದಾರೆ ಎಂಬ ಆರೋಪವೂ ಇದೆ.
ಮಾಹಿತಿಗಳ ಪ್ರಕಾರ, ದಿನಕ್ಕೆ 2 ರಿಂದ 3 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದು, ಹಾಡುಹಗಲೇ ಮೈಸೂರಿನ ತೋಟಗಳ ಹೊರವಲಯದಲ್ಲಿ ಜೂಜಾಟ ನಡೆಯುತ್ತಿದೆ ಎಂದು ಹೇಳಲಾಗಿದೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ.
ರೌಡಿ ಶೀಟರ್‌ಗಳಾದ ಮುಜ್ಜು, ಜಯರಾಮ್, ಭಟ್ಟ ರಮೇಶ್ ಸೇರಿದಂತೆ ಕೆಲವರು ಈ ದಂಧೆಯನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡ್ರಗ್ಸ್ ಪ್ರಕರಣಗಳ ನಂತರ ಇದೀಗ ಮೈಸೂರಿಗೆ ಜೂಜಾಟದ ಕಳಂಕ ಕೂಡ ತಗುಲಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ತವರಲ್ಲೇ ಇಂತಹ ಅಕ್ರಮಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ.
ಪೊಲೀಸರು ಈ ಬಗ್ಗೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿಂದೆ ಟಿ.ನರಸೀಪುರದ ತ್ರಿವೇಣಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಕೂಡ ಇಸ್ಪೀಟ್ ದಂಧೆ ನಡೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಎಲ್ಲಾ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ : ಬಟ್ಟೆ ಬ್ಯಾಗ್ ಖರೀದಿ ಹಗರಣ ; IAS ರೋಹಿಣಿ ಸಿಂಧೂರಿಗೆ ಸಂಕಷ್ಟ.. ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!



















