ಷ: ಏಷ್ಯಾಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದೆದುರು ಹೀನಾಯ ಸೋಲು ಕಂಡ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದಿಂದ ಕೆಂಡಾಮಂಡಲವಾಗಿರುವ ಪಿಸಿಬಿ, ತನ್ನ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸುವುದನ್ನು ತಡೆಯಲು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಅಮಾನತುಗೊಳಿಸಿಆದೇಶ ಹೊರಡಿಸಿದೆ.
ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮೈರ್ ಅಹ್ಮದ್ ಸೈಯದ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, “ವಿದೇಶಿ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಲು ಈ ಹಿಂದೆ ನೀಡಲಾಗಿದ್ದ ಎಲ್ಲಾ ಎನ್‌ಒಸಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಈ ತಡೆಹಿಡಿಯುವಿಕೆ ಜಾರಿಯಲ್ಲಿರುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರವು ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಆಟಗಾರರ ವಿದೇಶಿ ಲೀಗ್‌ಗಳ ಭಾಗವಹಿಸುವಿಕೆಗೆ ತಡೆಗೋಡೆಯೊಡ್ಡಿದೆ.
ಏಷ್ಯಾಕಪ್‌ನಾದ್ಯಂತ ಪಾಕಿಸ್ತಾನ ತಂಡದ ಪ್ರದರ್ಶನ ತೀವ್ರ ನಿರಾಸೆ ಮೂಡಿಸಿತ್ತು. ಈ ಬಗ್ಗೆ ಅಹ್ಮದ್ ಸೈಯದ್ ಮಾತನಾಡುತ್ತಾ, “ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಮಾತ್ರವಲ್ಲ, ನಾವು ಆಡಿದ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ ತಂಡದ ಆಟದ ಗುಣಮಟ್ಟದಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದವು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್, ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ನಿರಂತರವಾಗಿ ಆಡುವುದರಿಂದ ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ರಾಷ್ಟ್ರೀಯ ತಂಡದ ಮೇಲಿನ ಬದ್ಧತೆ ಕಡಿಮೆಯಾಗುತ್ತಿದೆ ಎಂಬುದು ಮಂಡಳಿಯ ಬಲವಾದ ಅಭಿಪ್ರಾಯವಾಗಿದೆ.
ಈ ನಿರ್ಧಾರವು ವಿವಿಧ ದೇಶಗಳ ಟಿ20 ಲೀಗ್‌ಗಳಲ್ಲಿ ದೊಡ್ಡ ಮೊತ್ತದ ಒಪ್ಪಂದಗಳನ್ನು ಹೊಂದಿರುವ ಹಲವಾರು ಆಟಗಾರರ ಮೇಲೆ ನೇರ ಆರ್ಥಿಕ ಮತ್ತು ವೃತ್ತಿಪರ ಪರಿಣಾಮ ಬೀರಲಿದೆ. ಆಟಗಾರರ ಕಾರ್ಯಭಾರ ನಿರ್ವಹಣೆ ಮತ್ತು ಪ್ರದರ್ಶನವನ್ನು ಸುಧಾರಿಸಲು ಪಿಸಿಬಿ ಈ ಕಠಿಣ ನಿಲುವು ತಳೆದಿದೆ. ಮುಂಬರುವ ಸರಣಿಗಳಿಗೆ ತಂಡವನ್ನು ಬಲಿಷ್ಠವಾಗಿ ಸಿದ್ಧಪಡಿಸುವುದು ಮತ್ತು ಆಟಗಾರರಲ್ಲಿ ಶಿಸ್ತು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ, ರಾಷ್ಟ್ರೀಯ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಸ್ಪಷ್ಟ ಸಂದೇಶವನ್ನು ಪಿಸಿಬಿ ಆಟಗಾರರಿಗೆ ರವಾನಿಸಿದೆ.