ನವದೆಹಲಿ/ಪೆನ್ಸಿಲ್ವೇನಿಯಾ: 43 ವರ್ಷಗಳು! ಇದು ಅಮೆರಿಕದ ಇತಿಹಾಸದಲ್ಲೇ ಸುದೀರ್ಘ ಕಾಲ ಸುಳ್ಳು ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯೊಬ್ಬರ ಕಥೆ. ಮಾಡದ ತಪ್ಪಿಗೆ ತಮ್ಮ ಯೌವನ, ಕನಸು, ಕುಟುಂಬ ಎಲ್ಲವನ್ನೂ ಕಳೆದುಕೊಂಡು, ಕೊನೆಗೂ ನಿರ್ದೋಷಿ ಎಂದು ಸಾಬೀತಾದಾಗ, ಸ್ವಾತಂತ್ರ್ಯದ ಬದಲು ಅವರಿಗೆ ಸಿಕ್ಕಿದ್ದು ಮತ್ತೊಂದು ಬಂಧನ. ಇದು ಭಾರತದಲ್ಲಿ ಹುಟ್ಟಿ, ಕೇವಲ 9 ತಿಂಗಳ ಮಗುವಾಗಿದ್ದಾಗ ಅಮೆರಿಕಕ್ಕೆ ವಲಸೆ ಹೋದ ಸುಬ್ರಮಣ್ಯಂ ‘ಸುಬು’ ವೇದಂ ಅವರ ಹೃದಯ ವಿದ್ರಾವಕ ಕಥೆ ಇದು.
1980ರಲ್ಲಿ ತಮ್ಮ ಕಾಲೇಜು ಸಹಪಾಠಿಯೊಬ್ಬನ ಕೊಲೆ ಆರೋಪದ ಮೇಲೆ ಬಂಧಿಸಲ್ಪಟ್ಟಾಗ ಸುಬು ವೇದಂ ಅವರಿಗೆ ಕೇವಲ 20 ವರ್ಷ. ಯಾವುದೇ ನೇರ ಸಾಕ್ಷ್ಯ, ಕೊಲೆಗೆ ಬಳಸಿದ ಆಯುಧ, ಸಾಕ್ಷಿಗಳು ಇಲ್ಲದಿದ್ದರೂ, ಕೇವಲ ಸಂದರ್ಭೋಚಿತ ಸಾಕ್ಷ್ಯಗಳ ಆಧಾರದ ಮೇಲೆ ಅವರಿಗೆ 1983ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅಂದಿನಿಂದ, ಕಳೆದ ನಾಲ್ಕು ದಶಕಗಳ ಕಾಲ ಅವರು ಜೈಲಿನ ಕತ್ತಲೆಯಲ್ಲೇ ಬದುಕು ಸವೆಸಿದರು.
2022ರಲ್ಲಿ ಹೊಸದಾಗಿ ಪತ್ತೆಯಾದ ಎಫ್‌ಬಿಐ (FBI) ವರದಿಯೊಂದು, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಮೂಲ ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಟರ್‌ಗಳು ಸುಬು ಅವರ ನಿರ್ದೋಷಿತ್ವವನ್ನು ಸಾಬೀತುಪಡಿಸಬಹುದಾಗಿದ್ದ ಪ್ರಮುಖ ಸಾಕ್ಷ್ಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದರು ಎಂಬ ಸತ್ಯ ಹೊರಬಿದ್ದಿತು. ಈ ಮಹತ್ವದ ಸಾಕ್ಷ್ಯವನ್ನು ಆಧರಿಸಿ, ಪೆನ್ಸಿಲ್ವೇನಿಯಾ ನ್ಯಾಯಾಲಯವು ಅಕ್ಟೋಬರ್ 3, 2025 ರಂದು ಸುಬು ಅವರನ್ನು ಸಂಪೂರ್ಣವಾಗಿ ನಿರ್ದೋಷಿ ಎಂದು ಘೋಷಿಸಿ, ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.
43 ವರ್ಷಗಳ ನಂತರ, ಅಕ್ಟೋಬರ್ 3ರಂದು ಜೈಲಿನಿಂದ ಹೊರಬಂದ 64 ವರ್ಷದ ಸುಬು ವೇದಂ ಅವರ ಸ್ವಾತಂತ್ರ್ಯ ಕೆಲವೇ ಕ್ಷಣಗಳ ಕಾಲ ಮಾತ್ರ ಉಳಿಯಿತು. ಜೈಲಿನ ಗೇಟ್‌ನ ಹೊರಗೆ ಅವರಿಗಾಗಿ ಕಾದಿದ್ದು, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು. ಅವರು ಸುಬು ಅವರನ್ನು ತಕ್ಷಣವೇ ಬಂಧಿಸಿ, ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಿದರು. ಇದಕ್ಕೆ ಕಾರಣ, 1980ರ ದಶಕದಲ್ಲಿ ಸುಬು ಅವರ ಮೇಲಿದ್ದ ಹಳೆಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಗಡಿಪಾರು ಆದೇಶ. ಕೊಲೆ ಪ್ರಕರಣದಿಂದ ನಿರ್ದೋಷಿ ಎಂದು ಸಾಬೀತಾದರೂ, ಹಳೆಯ ಡ್ರಗ್ಸ್ ಪ್ರಕರಣದ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ.
ಭಾರತದಲ್ಲಿ ಯಾರೂ ಇಲ್ಲ
“ನನ್ನ ಹೆಸರು ಈಗ ಆರೋಪಮುಕ್ತವಾಗಿದೆ, ನಾನೀಗ ಕೈದಿಯಲ್ಲ, ಕೇವಲ ಬಂಧಿತ (detainee),” ಎಂದು ಸುಬು ತಮ್ಮ ಕುಟುಂಬಕ್ಕೆ ಕಳುಹಿಸಿದ ಸಂದೇಶದಲ್ಲಿ ನೋವು ತೋಡಿಕೊಂಡಿದ್ದಾರೆ. ಕೇವಲ 9 ತಿಂಗಳ ಮಗುವಾಗಿದ್ದಾಗ ಭಾರತವನ್ನು ತೊರೆದು, ಅಮೆರಿಕವನ್ನೇ ತಮ್ಮ ಏಕೈಕ ಮನೆಯಾಗಿಸಿಕೊಂಡಿರುವ ಸುಬು ಅವರಿಗೆ ಭಾರತದಲ್ಲಿ ಯಾರ ಪರಿಚಯವೂ ಇಲ್ಲ. ಅವರ ತಂದೆ-ತಾಯಿ, ಮಗನ ಬಿಡುಗಡೆಗಾಗಿ ಕಾಯುತ್ತಲೇ ಇಹಲೋಕ ತ್ಯಜಿಸಿದ್ದಾರೆ.
ಇದೀಗ, ಸುಬು ಅವರ ಸಹೋದರಿ ಮತ್ತು ಅವರ ಕುಟುಂಬವು ಈ ಅನ್ಯಾಯದ ಗಡಿಪಾರು ಆದೇಶದ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ. 43 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿ ಗೆದ್ದರೂ, ಸುಬು ಅವರ ನಿಜವಾದ ಸ್ವಾತಂತ್ರ್ಯದ ಹೋರಾಟ ಇನ್ನೂ ಮುಗಿದಿಲ್ಲ. ಈ ಘಟನೆಯು ಅಮೆರಿಕದ ನ್ಯಾಯಾಂಗ ಮತ್ತು ವಲಸೆ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿಟ್ಟಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ; ಪ್ರಿಯಕರನ ಜೊತೆ ಸೇರಿ ಕೊಲೆಗೈದ ಪಾಪಿ ಪತ್ನಿ!



















