ಬೆಂಗಳೂರು: ಅಸಮರ್ಥ ನಾಯಕತ್ವ, ಉಗ್ರ ಪೋಷಣೆ, ಮೂಲಭೂತವಾದದಿಂದಾಗಿ ಆರ್ಥಿಕವಾಗಿ ದಿವಾಳಿಯೆದ್ದಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಆಘಾತವಾಗಿದೆ. ತಮ್ಮ ದೇಶದ ಮೇಲೆ ದಾಳಿ ಮಾಡಿದ ಕಾರಣ ಅಫಘಾನಿಸ್ತಾನವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಅಫಘಾನಿಸ್ತಾನವು ಪಾಕಿಸ್ತಾನಕ್ಕೆ ಟೊಮ್ಯಾಟೋ ರಫ್ತು ಮಾಡುವುದನ್ನು ನಿಲ್ಲಿಸಿದ ಪರಿಣಾಮವಾಗಿ, ಪಾಕಿಸ್ತಾನದಲ್ಲಿ ಒಂದು ಕೆ.ಜಿ ಟೊಮ್ಯಾಟೋಗೆ ಈಗ 700 ರೂಪಾಯಿ ಆಗಿದೆ. ಇದರಿಂದಾಗಿ ಪಾಕ್ ನಾಗರಿಕರು ಪರದಾಡುವಂತಾಗಿದೆ.
ಇತ್ತೀಚೆಗೆ ಪಾಕಿಸ್ತಾನವು ಅಫಘಾನಿಸ್ತಾದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಫಘಾನಿಸ್ತಾನ ಕೂಡ ದಾಳಿ ನಡೆಸಿ, ಪಾಕ್ ಸೈನಿಕರನ್ನು ಹತ್ಯೆ ಮಾಡಿತ್ತು. ಅಷ್ಟೇ ಅಲ್ಲ, ಪಾಕ್ ಸೈನಿಕರ ಸಮವಸ್ತ್ರವನ್ನು ಕಂಬಕ್ಕೆ ನೇತುಹಾಕಿ, ಪಾಕ್ ಯುದ್ಧ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡು, ಅವುಗಳನ್ನು ಪರೇಡ್ ನಡೆಸಿತ್ತು. ಆ ಮೂಲಕ ಪಾಕಿಸ್ತಾನದ ವಿರುದ್ಧ ಶೌರ್ಯ ಮೆರೆದಿತ್ತು. ಈಗ ಟೊಮ್ಯಾಟೋ ಕೂಡ ರಫ್ತು ಮಾಡದ ಕಾರಣ ಪಾಕಿಸ್ತಾನವು ಸಂಕಷ್ಟಕ್ಕೆ ಸಿಲುಕಿದೆ.
ಆರ್ಥಿಕ ದುಸ್ಥಿತಿಯಿಂದಾಗಿ ಪಾಕಿಸ್ತಾನದಲ್ಲಿ ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಈಗ ಅಫಘಾನಿಸ್ತಾನದಿಂದ ಟೊಮ್ಯಾಟೋ ಸೇರಿ ಹಲವು ಅಗತ್ಯ ವಸ್ತುಗಳ ಪೂರೈಕೆಯಾಗದ ಕಾರಣ ಬೆಲೆ ಮತ್ತಷ್ಟು ಜಾಸ್ತಿಯಾಗಿವೆ. ಒಂದು ಕೆ.ಜಿ ಟೊಮ್ಯಾಟೋ ಬೆಲೆಯೀಗ 700 ರೂಪಾಯಿ ಆಗಿದೆ. ಇದರಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಇನ್ನು ಪಾಕಿಸ್ತಾನದ ಹಲವೆಡೆ ದಲ್ಲಾಳಿಗಳ ಕಾಟವೂ ಜಾಸ್ತಿಯಾಗಿದ್ದು, ಟೊಮ್ಯಾಟೊ ಬೆಲೆಯನ್ನು ಇನ್ನಿಲ್ಲದಂತೆ ಜಾಸ್ತಿ ಮಾಡಿದ್ದಾರೆ.
ಮುಲ್ತಾನ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಕೆ.ಜಿ ಟೊಮ್ಯಾಟೋಗೆ 170 ರೂಪಾಯಿ ಇತ್ತು. ಈಗ ದಲ್ಲಾಳಿಗಳು ಹಾಗೂ ವ್ಯಾಪಾರಿಗಳಿಂದಾಗಿ ಟೊಮ್ಯಾಟೋ ಬೆಲೆಯು 450 ರೂ.ಗೆ ಏರಿಕೆಯಾಗಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಇದರಿಂದಾಗಿಯೇ ಇರಾನ್ ನಿಂದ ಕೂಡ ಹೆಚ್ಚಿನ ವಸ್ತುಗಳ ಪೂರೈಕೆಯಾಗುತ್ತಿಲ್ಲ. ಅದರಲ್ಲೂ, ಅಫಘಾನಿಸ್ತಾನದ ಜತೆಗಿನ ಸಂಘರ್ಷವೇ ಬೆಲೆಯೇರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.



















