ಕಾಬೂಲ್: ಭಾರತದ ಬಳಿಕ ಇದೀಗ ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನಕ್ಕೆ ಹರಿಯುವ ನದಿ ನೀರನ್ನು ನಿರ್ಬಂಧಿಸಲು ಮುಂದಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ನಡೆದ ಮಾರಣಾಂತಿಕ ಸಂಘರ್ಷದ ಕೆಲವೇ ವಾರಗಳಲ್ಲಿ, “ಕುನಾರ್ ನದಿಗೆ ಆದಷ್ಟು ಬೇಗ ಅಣೆಕಟ್ಟು ನಿರ್ಮಿಸಲಾಗುವುದು” ಎಂದು ತಾಲಿಬಾನ್‌ನ ಸರ್ವೋಚ್ಚ ನಾಯಕ ಮಾವ್ಲವಿ ಹಿಬತುಲ್ಲಾ ಅಖುಂದ್ಜಾದಾ ಆದೇಶ ಹೊರಡಿಸಿದ್ದಾರೆ.
ಈ ನಿರ್ಧಾರದಿಂದಾಗಿ ಪಾಕಿಸ್ತಾನಕ್ಕೆ ನೀರಿನ ಹರಿವು ಕಡಿಮೆಯಾಗಲಿದ್ದು, ಇದು ಈಗಾಗಲೇ ಇಂಧನ ಮತ್ತು ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ. ಪಾಕಿಸ್ತಾನದೊಂದಿಗಿನ ಸಿಂಧೂ ನೀರು ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಅಫ್ಘಾನಿಸ್ತಾನ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಕುನಾರ್ ನದಿಗೆ ಅಣೆಕಟ್ಟು
ಅಫ್ಘಾನಿಸ್ತಾನದ ಮಾಹಿತಿ ಸಚಿವಾಲಯದ ಪ್ರಕಾರ, ತಾಲಿಬಾನ್ ಸರ್ವೋಚ್ಚ ನಾಯಕ ಅಖುಂದ್ಜಾದಾ ಅವರು, ಕುನಾರ್ ನದಿಗೆ ಅಣೆಕಟ್ಟು ನಿರ್ಮಾಣವನ್ನು ತಕ್ಷಣವೇ ಪ್ರಾರಂಭಿಸುವಂತೆ ಜಲ ಮತ್ತು ಇಂಧನ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. “ವಿದೇಶಿ ಕಂಪನಿಗಳಿಗಾಗಿ ಕಾಯುವ ಬದಲು, ದೇಶೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು” ಎಂದು ಅವರು ಆದೇಶಿಸಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನವು ತನ್ನ “ನೀರಿನ ಹಕ್ಕನ್ನು” ಪ್ರತಿಪಾದಿಸಿದೆ.
ಈ ಕುನಾರ್ ನದಿಯು ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಗಳಲ್ಲಿ ಹುಟ್ಟಿ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯವನ್ನು ಪ್ರವೇಶಿಸಿ ಕಾಬೂಲ್ ನದಿಯನ್ನು ಸೇರುತ್ತದೆ. ಪಾಕಿಸ್ತಾನದಲ್ಲಿ ಇದನ್ನು ‘ಚಿತ್ರಾಲ್ ನದಿ’ ಎಂದು ಕರೆಯಲಾಗುತ್ತದೆ. ಕಾಬೂಲ್ ನದಿಯು ಪಾಕಿಸ್ತಾನದ ಕೃಷಿ ಮತ್ತು ನೀರಿನ ಅಗತ್ಯಗಳಿಗೆ ನಿರ್ಣಾಯಕವಾಗಿದೆ. ಕುನಾರ್ ನದಿಯ ನೀರಿನ ಹರಿವು ಕಡಿಮೆಯಾದರೆ, ಅದು ಕಾಬೂಲ್ ನದಿ ಮತ್ತು ಅಂತಿಮವಾಗಿ ಸಿಂಧೂ ನದಿಯ ಮೇಲೆ ಪರಿಣಾಮ ಬೀರಲಿದೆ, ಇದರಿಂದ ಪಂಜಾಬ್ ಪ್ರಾಂತ್ಯಕ್ಕೂ ತೊಂದರೆಯಾಗಲಿದೆ.
ಯಾವುದೇ ಜಲ ಒಪ್ಪಂದವಿಲ್ಲ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಜಲ-ಹಂಚಿಕೆ ಒಪ್ಪಂದವಿಲ್ಲ. ಹೀಗಾಗಿ ಅಫ್ಘಾನಿಸ್ತಾನದ ಈ ಏಕಪಕ್ಷೀಯ ನಿರ್ಧಾರವು ಪ್ರಾದೇಶಿಕ ಜಲ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಇಸ್ಲಾಮಾಬಾದ್ ಈ ಹಿಂದೆಯೇ ಆತಂಕ ವ್ಯಕ್ತಪಡಿಸಿತ್ತು. ತಾಲಿಬಾನ್ ಆಡಳಿತ ಅಧಿಕಾರಕ್ಕೆ ಬಂದಾಗಿನಿಂದ, ದೇಶದ ಜಲ ಸಾರ್ವಭೌಮತ್ವವನ್ನು ಸ್ಥಾಪಿಸಲು ಆದ್ಯತೆ ನೀಡುತ್ತಿದ್ದು, ಅಣೆಕಟ್ಟು ನಿರ್ಮಾಣ ಯೋಜನೆಗಳನ್ನು ಚುರುಕುಗೊಳಿಸಿದೆ.
ಭಾರತ-ಅಫ್ಘಾನ್ ಸಹಕಾರ
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮಾವ್ಲವಿ ಅಮೀರ್ ಖಾನ್ ಮುತ್ತಾಕಿ ಅವರು ಭಾರತಕ್ಕೆ ಭೇಟಿ ನೀಡಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದ ಒಂದು ವಾರದಲ್ಲೇ ಈ ಬೆಳವಣಿಗೆ ನಡೆದಿದೆ. ಈ ಸಭೆಯಲ್ಲಿ ಜಲವಿದ್ಯುತ್ ಯೋಜನೆಗಳಲ್ಲಿ ಸಹಕರಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದವು. ಭಾರತ ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟು (ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟು) ಮತ್ತು ಶಹತೂತ್ ಅಣೆಕಟ್ಟು ನಿರ್ಮಾಣಕ್ಕೆ ಸಹಕಾರ ನೀಡಿತ್ತು ಎಂಬುದು ಗಮನಾರ್ಹ.



















