ಗುವಾಹಟಿ: ಇಲ್ಲಿನ ಬರ್ಸಾಪರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಒಂದು ಭಾವನಾತ್ಮಕ ಘಟನೆ ಸಾಕ್ಷಿಯಾಯಿತು. ತಾಲಿಬಾನ್ ಆಡಳಿತದಿಂದಾಗಿ ತಮ್ಮ ದೇಶವನ್ನು ತೊರೆದು ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡವು ಈ ಪಂದ್ಯವನ್ನು ವೀಕ್ಷಿಸಲು ವಿಶೇಷ ಅತಿಥಿಗಳಾಗಿ ಹಾಜರಾಗಿತ್ತು.
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರದ ಪ್ರತೀಕಾರದ ಭೀತಿಯಿಂದಾಗಿ, ಅಫ್ಘಾನ್ ಆಟಗಾರ್ತಿಯರ ಈ ವಿಶ್ವಕಪ್ ಪ್ರವಾಸದ ವಿವರಗಳನ್ನು ಐಸಿಸಿ ಗೌಪ್ಯವಾಗಿಟ್ಟಿತ್ತು. ಯಾವುದೇ ಅಧಿಕೃತ ಘೋಷಣೆಗಳಿಲ್ಲದೆ, ಈ ತಂಡವು ಕಲಿಕಾ ಪ್ರವಾಸದ ಭಾಗವಾಗಿ ಗುವಾಹಟಿಗೆ ಭೇಟಿ ನೀಡಿದೆ. ಜಾಗತಿಕ ಕ್ರಿಕೆಟ್ ಭೂಪಟದಲ್ಲಿ ಈ ಮಹಿಳಾ ಆಟಗಾರ್ತಿಯರನ್ನು ಮರಳಿ ಮುಖ್ಯವಾಹಿನಿಗೆ ತರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಮಳೆಯಿಂದಾಗಿ 47 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತವು 8 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ (53) ಮತ್ತು ಅಮನ್‌ಜೋತ್ ಕೌರ್ (57) ಅಮೋಘ ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಆಸರೆಯಾದರು. ಹರ್ಲೀನ್ ಡಿಯೋಲ್ (48) ಮತ್ತು ಪ್ರತೀಕಾ ರಾವಲ್ (37) ಉಪಯುಕ್ತ ಕಾಣಿಕೆ ನೀಡಿದರೆ, ಕೊನೆಯಲ್ಲಿ ಸ್ನೇಹಾ ರಾಣಾ ಕೇವಲ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 28 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 8 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಡಕ್‌ವರ್ತ್-ಲೂಯಿಸ್ ನಿಯಮದ ಅನ್ವಯ ಶ್ರೀಲಂಕಾಕ್ಕೆ 271 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು.
“ಗಾಯಕನಿಗೆ ಶ್ರದ್ಧಾಂಜಲಿ”
ಪಂದ್ಯ ಆರಂಭಕ್ಕೂ ಮುನ್ನ ನಡೆದ 40 ನಿಮಿಷಗಳ ಉದ್ಘಾಟನಾ ಸಮಾರಂಭದಲ್ಲಿ, ಇತ್ತೀಚೆಗೆ ನಿಧನರಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರಿಗೆ ಸಂಗೀತ ಶ್ರದ್ಧಾಂಜಲಿ ಸಲ್ಲಿಸಲಾಯಿತು.