ಕಾಬೂಲ್ : ಇತ್ತ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರು ಭಾರತ ಪ್ರವಾಸದಲ್ಲಿರುವಂತೆಯೇ ಅತ್ತ ಅಫ್ಘನ್-ಪಾಕಿಸ್ತಾನದ ಗಡಿಯಲ್ಲಿ ಭಾರೀ ಘರ್ಷಣೆ ಆರಂಭವಾಗಿದೆ. ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 15 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ. ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನ್ ಪ್ರದೇಶದ ಮೇಲೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ವಾಯು ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಹೆಲ್ಮಂಡ್ ಪ್ರಾಂತೀಯ ಸರ್ಕಾರದ ವಕ್ತಾರ ಮೌಲ್ವಿ ಮೊಹಮ್ಮದ್ ಕಾಸಿಮ್ ರಿಯಾಜ್ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ಬಹ್ರಾಂಪುರ್ ಜಿಲ್ಲೆಯ ಡುರಾಂಡ್ ಲೈನ್ ಬಳಿ ಆಫ್ಘನ್ ಪಡೆಗಳು ನಡೆಸಿದ ಪ್ರತೀಕಾರದ ಕಾರ್ಯಾಚರಣೆಯಲ್ಲಿ 15 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಅಫ್ಘಾನಿಸ್ತಾನದ ಪಡೆಗಳು ಮೂರು ಪಾಕಿಸ್ತಾನಿ ಮಿಲಿಟರಿ ಹೊರಠಾಣೆಗಳನ್ನು ವಶಪಡಿಸಿಕೊಂಡಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನವು ಕಾಬೂಲ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ, ಅಫ್ಘಾನಿ ಪಡೆಗಳು ಹೆಲ್ಮಂಡ್, ಕಂದಹಾರ್, ಜಾಬುಲ್, ಪಕ್ತಿಕಾ, ಪಕ್ತಿಯಾ, ಖೋಸ್ಟ್, ನಂಗರ್‌ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ಗಡಿಠಾಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿವೆ.
ಆರೋಪ-ಪ್ರತ್ಯಾರೋಪ : ಗುರುವಾರ ಅಫ್ಘಾನಿಸ್ತಾನದಲ್ಲಿ ಮೂರು ಸ್ಫೋಟಗಳು ವರದಿಯಾಗಿದ್ದವು, ಎರಡು ಕಾಬೂಲ್‌ನಲ್ಲಿ ಮತ್ತು ಒಂದು ಆಗ್ನೇಯ ಪಕ್ತಿಕಾದಲ್ಲಿ ಸಂಭವಿಸಿತ್ತು. ಈ ದಾಳಿಯ ಹಿಂದೆ ಇಸ್ಲಾಮಾಬಾದ್ ಕೈವಾಡವಿದೆ ಎಂದು ಆರೋಪಿಸಿದ್ದ ತಾಲಿಬಾನ್ ಆಡಳಿತದ ರಕ್ಷಣಾ ಸಚಿವಾಲಯ, ಇದು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿತ್ತು. “ಪಾಕಿಸ್ತಾನಿ ಸೇನೆಯು ಕಾಬೂಲ್ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ, ತಾಲಿಬಾನ್ ಪಡೆಗಳು ಗಡಿಯುದ್ದಕ್ಕೂ ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ತೀವ್ರವಾದ ಸಂಘರ್ಷದಲ್ಲಿ ತೊಡಗಿವೆ” ಎಂದು ಆಫ್ಘನ್ ಸೇನೆ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಗುರುವಾರದ ದಾಳಿಗಳ ಹಿಂದೆ ತನ್ನ ಕೈವಾಡವಿದೆ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿಲ್ಲ. ಆದರೆ “ತನ್ನ ನೆಲದಲ್ಲಿ ಪಾಕಿಸ್ತಾನಿ ತಾಲಿಬಾನ್‌ಗೆ ಆಶ್ರಯ ನೀಡುವುದನ್ನು ನಿಲ್ಲಿಸುವಂತೆ” ಕಾಬೂಲ್‌ಗೆ ಕರೆ ನೀಡಿದೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) : ಪಾಕಿಸ್ತಾನಿ ತಾಲಿಬಾನ್ ಎಂದೇ ಕರೆಯಲ್ಪಡುವ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಅಫ್ಘಾನ್ ತಾಲಿಬಾನ್‌ನ ಸೈದ್ಧಾಂತಿಕ ಮಿತ್ರ ಸಂಘಟನೆಯಾಗಿದೆ. 2021ರಿಂದ ಪಾಕಿಸ್ತಾನದಲ್ಲಿ ನೂರಾರು ಸೈನಿಕರನ್ನು ಹತ್ಯೆಗೈದಿರುವ ಆರೋಪವನ್ನು ಟಿಟಿಪಿ ಮೇಲೆ ಪಾಕ್ ಹೊರಿಸಿದೆ. ಟಿಟಿಪಿ ಉಗ್ರರು ಅಫ್ಘಾನಿಸ್ತಾನದ ಗಡಿಯಲ್ಲಿರುವ ಪರ್ವತ ಪ್ರದೇಶಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ತಮ್ಮ ಹಿಂಸಾಚಾರವನ್ನು ಇತ್ತೀಚಿನ ತಿಂಗಳುಗಳಲ್ಲಿ ತೀವ್ರಗೊಳಿಸಿದ್ದಾರೆ. ಪಾಕಿಸ್ತಾನದ ಮೇಲೆ ದಾಳಿ ಮಾಡಲು ಉಗ್ರರು ತಮ್ಮ ನೆಲವನ್ನು ಬಳಸಿಕೊಳ್ಳುವುದನ್ನು ತಡೆಯುವಲ್ಲಿ ಅಫ್ಘಾನಿಸ್ತಾನ ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ. ಆದರೆ, ಈ ಆರೋಪವನ್ನು ಕಾಬೂಲ್ ನಿರಾಕರಿಸಿದೆ.
ಪಾಕಿಸ್ತಾನದ ಎಚ್ಚರಿಕೆ : ಟಿಟಿಪಿಯು ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರದಿಂದ ಗಣನೀಯ ಪ್ರಮಾಣದ ಕಾರ್ಯಾಚರಣೆ ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ಪಡೆಯುತ್ತಿದೆ ಎಂದು ಈ ವರ್ಷದ ಆರಂಭದಲ್ಲಿ ವಿಶ್ವಸಂಸ್ಥೆಯ ವರದಿಯೊಂದು ಹೇಳಿತ್ತು. ಟಿಟಿಪಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಆಫ್ಘನ್ ತಾಲಿಬಾನ್‌ಗೆ ಮನವೊಲಿಸುವ ಪ್ರಯತ್ನಗಳು ವಿಫಲವಾಗಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಕಳೆದ ವಾರ ರಾಷ್ಟ್ರೀಯ ಅಸೆಂಬ್ಲಿಗೆ ತಿಳಿಸಿದ್ದರು. “ನಾವು ಇದನ್ನು ಇನ್ನು ಮುಂದೆ ಸಹಿಸುವುದಿಲ್ಲ. ಅವರಿಗೆ ಅನುಕೂಲ ಮಾಡಿಕೊಡುವವರ ವಿರುದ್ಧ ನಾವು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕು, ಆ ಅಡಗುತಾಣಗಳು ನಮ್ಮ ನೆಲದಲ್ಲಿರಲಿ ಅಥವಾ ಅಫ್ಘಾನ್ ನೆಲದಲ್ಲಿರಲಿ, ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಅವರು ಎಚ್ಚರಿಸಿದ್ದರು. ಶನಿವಾರ, ವಾಯುವ್ಯ ಪಾಕಿಸ್ತಾನದಲ್ಲಿ ನಡೆದ ಮಾರಣಾಂತಿಕ ದಾಳಿಯ ಹೊಣೆಯನ್ನು ಟಿಟಿಪಿ ಹೊತ್ತುಕೊಂಡಿದ್ದು, ಈ ದಾಳಿಯಲ್ಲಿ 20 ಭದ್ರತಾ ಅಧಿಕಾರಿಗಳು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.