ಬೆಂಗಳೂರು: ಭಾರತೀಯ ವಾಯುಪಡೆಯ ವಿಮಾನಗಳು ಸೋಮವಾರ ಬೆಳಗ್ಗಿನಿಂದಲೇ ನಗರದ ತಿಳಿ ಆಗಸದಲ್ಲಿ ಚಿತ್ತಾರ ಮೂಡಿಸಿದವು. ರಷ್ಯಾ, ಅಮೆರಿಕದ ವಾಯುಪಡೆಯ ಬಲಶಾಲಿ ಐದನೇ ತಲೆಮಾರಿನ ಯುದ್ಧ ವಿಮಾನಗಳೂ ಕಿವಿಗಡಚಿಕ್ಕುವಂತೆ ಸದ್ದು ಮಾಡಿಕೊಂಡು ಚಂಗಮೆ ಹಾರಿ ಹೋದವು… ಇವೆಲ್ಲವೂ ಬೆಂಗಳೂರಿನಲ್ಲಿ ಆರಂಭಗೊಂಡ 15ನೇ ಆವೃತ್ತಿಯ ಏರೋ ಇಂಡಿಯಾ 2025ರಲ್ಲಿ (Aero India 2025) ಕಂಡು ಬಂದ ದೃಶ್ಯಗಳು.
As #India locks onto its next-generation air superiority ambitions, the US Air Force’s F-35 Lightning II, the apex predator of American 5th-generation stealth fighters, is set to make a high-profile touchdown at #AeroIndia2025 in Bengaluru from February 10-14. Russia has already… pic.twitter.com/AFpDWz4uQD
— JahansherFirozeChoudhury (@Jahansher) February 7, 2025
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ವೈಮಾನಿಕ ಪ್ರದರ್ಶನದಲ್ಲಿ ವಿಮಾನಗಳು, ಹೆಲಿಕಾಪ್ಟರ್ಗಳು ಗಣ್ಯರನ್ನು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಐದು ದಿನಗಳ ಕಾಲ ನಡೆಯುವ ಈ ವೈಮಾನಿಕ ಪ್ರದರ್ಶನ ಹಾಗೂ ಹಾರಾಟ ಏಷ್ಯಾದ ಅತ್ಯಂತ ದೊಡ್ಡ ಏರೋ ಶೋಗಳಲ್ಲಿ ಒಂದು. ಹಲವು ದೇಶಗಳು ಮತ್ತು ನಾನಾ ಕಂಪನಿಗಳು ಪಾಲ್ಗೊಂಡು ತಮ್ಮ ಉತ್ಪನ್ನಗಳು ಹಾಗೂ ಏರೋಸ್ಪೇಸ್ ಕ್ಷೇತ್ರದ ಸಾಮರ್ಥ್ಯ ಪ್ರದರ್ಶಿಸುತ್ತಿವೆ.
ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಮೊದಲ ಪ್ರದರ್ಶನದ ನೇತೃತ್ವ ವಹಿಸಿದ್ದರು. ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದ ದೇಶೀಯ ಯುದ್ಧವಿಮಾನ ‘ತೇಜಸ್’ ನಲ್ಲಿ ಹಾರಾಟ ನಡೆಸಿದರು.
ಮಹಿಳಾ ಶಕ್ತಿ
ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ಗಳು ರಾಫೆಲ್ ವಿಮಾನಗಳಲ್ಲಿ ಹಾರಾಟ ನಡೆಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಮೂಲಕ ಭಾರತೀಯ ವಾಯುಪಡೆಯಲ್ಲಿನ ಮಹಿಳೆಯರ ಪ್ರಭಾವ ಹೆಚ್ಚಳವಾಗಿದೆ ಎಂಬುದನ್ನು ಸಾಬೀತುಪಡಿಸಿದರು.
ಇದನ್ನೂ ಓದಿ: ಏರ್ ಶೋಗೆ ಕ್ಷಣಗಣನೆ: ಬುಕಿಂಗ್ ಆರಂಭ!
ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ ಏರೋಬ್ಯಾಟಿಕ್ ತಂಡ’ (SKAT) ಹಾರಾಟ ನಡೆಸಿದಾಗ ಶಿಳ್ಳೆ, ಚಪ್ಪಾಳೆಗಳು ಜೋರು ಕೇಳಿ ಬಂದವು. ಅದೇ ರೀತಿ ಏಕಕಾಲಕ್ಕೆ ಒಂಬತ್ತು ಹಾಕ್ ಎಂಕೆ 132 ವಿಮಾನಗಳನ್ನು ಜತೆಜತೆಯಾಗಿ ಹಾರಾಟ ನಡೆಸಿ ಬಾನಲ್ಲಿ ಬಗೆಬಗೆಯ ಚಿತ್ತಾರ ಮೂಡಿಸಿದವು. ನೌಕಾಪಡೆಯ ‘ವರುಣ’, ‘ಜಾಗ್ವಾರ್’ ವಿಮಾನಗಳ ಹಾರಾಟ ಮೈನವಿರೇಳಿಸುವಂತಿತ್ತು.
ಎಚ್ಎಎಲ್ ನಿರ್ಮಿತ ಸಣ್ಣ ಯುಟಿಲಿಟಿ ಹೆಲಿಕಾಪ್ಟರ್ಗಳು ಚಿತ್ತಾಕರ್ಷಕ ಏರೋಬ್ಯಾಟಿಕ್ ಪ್ರದರ್ಶನ ನೀಡಿದವು. ಈ ಹೆಲಿಕಾಪ್ಟರ್ಗಳು ಎತ್ತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಗಳಿಗೆ ನೆರವಾಗುತ್ತವೆ.
ಅಮೆರಿಕದ ಎಫ್-35 ಮತ್ತು ರಷ್ಯಾದ ಎಸ್ಯು-57 ಪ್ರದರ್ಶನ
ಏರೋ ಇಂಡಿಯಾದ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಪ್ರಮುಖ ಐದನೇ ತಲೆಮಾರಿನ ಯುದ್ಧವಿಮಾನಗಳು ಪ್ರದರ್ಶನ ನೀಡಿದವು. ಅಮೆರಿಕಾದ ಎಫ್-35 ಲೈಟ್ನಿಂಗ್ II ಮತ್ತು ರಷ್ಯಾದ ಎಸ್ಯು-57 ಯುದ್ಧ ವಿಮಾನಗಳು ಈ ಬಾರಿ ಪಾಲ್ಗೊಂಡಿವೆ.
ಬೆಂಗಳೂರು ಏರೋಸ್ಪೇಸ್ ರಾಜಧಾನಿ : ಡಿ ಕೆ ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, “ಕರ್ನಾಟಕ ಹೊಸ ತಂತ್ರಜ್ಞಾನಗಳು ಮತ್ತು ಜಾಗತಿಕ ಹೂಡಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಬೆಂಗಳೂರು ದೇಶದ ಏರೋಸ್ಪೇಸ್ ರಾಜಧಾನಿಯೂ ಹೌದು. ಇದು ಶೇಕಡಾ 60ಕ್ಕೂ ಹೆಚ್ಚು ಏರೋಸ್ಪೇಸ್ ತಯಾರಿಕೆ ಮತ್ತು ರಕ್ಷಣಾ ಸಂಶೋಧನೆಗೆ ಕೊಡುಗೆ ನೀಡುತ್ತಿದೆ” ಎಂದು ಹೇಳಿದರು.