ಬೆಂಗಳೂರು: ಇತ್ತೀಚೆಗಷ್ಟೇ ಬೆಲೆ ಏರಿಕೆ ಮಾಡಿರುವ ನಮ್ಮ ಮೆಟ್ರೋ ಈಗ ಮತ್ತೊಂದು ಆದಾಯದ ಮೂಲ ಹುಡುಕಿಕೊಂಡಿದೆ.
ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸದ್ಯ ಜಾಹೀರಾತಿಗೆ ಸ್ಥಳಾವಕಾಶ ನೀಡಲು ಮುಂದಾಗಿದ್ದು, ಆರ್ಥಿಕವಾಗಿ ಚೇತರಿಕೆ ಕಾಣಲು ಮುಂದಾಗಿದೆ. ಈ ಕುರಿತು ಅರ್ಹ ಸಂಸ್ಥೆಗಳಿಂದ ಟೆಂಡರ್ ಅಹ್ವಾನಿಸಿದೆ. ಚೆಲ್ಲಘಟ್ಟದಿಂದ ವೈಟ್‌ಫೀಲ್ಡ್ (ನೇರಳೆ ಮಾರ್ಗ) ಮತ್ತು ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ (ಹಸಿರು ಮಾರ್ಗ) ವರೆಗಿನ ಆಯ್ದ ನಿಲ್ದಾಣಗಳ ಒಳಗೆ ಜಾಹೀರಾತು ಪ್ರದರ್ಶನಕ್ಕೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.
ಇಂಟರ್‌ಚೇಂಜ್ ನಿಲ್ದಾಣದಲ್ಲಿ ಆರು ಸಾವಿರ ಚ.ಮೀ ಹಾಗೂ ಉಳಿದ ನಿಲ್ದಾಣದಲ್ಲಿ 3 ಸಾವಿರ ಚದರ ಮೀಟರ್ ಸ್ಥಳಾವಕಾಶ ನೀಡಿದೆ. ಅಲ್ಲದೇ, ಕೆಲವು ನಿಲ್ದಾಣಗಳಲ್ಲಿ ಹೆಚ್ಚುವರಿ ಸ್ಥಳವಕಾಶಕ್ಕೂ ಅವಕಾಶ ಮಾಡಿಕೊಟ್ಟಿದೆ.
‘ನಮ್ಮ ಮೆಟ್ರೊ’ಗೆ ಟೆಕೆಟ್ ಮೂಲಕ ಮಾತ್ರ ಹೆಚ್ಚಿನ ಆದಾಯ ಬರುತ್ತಿದೆ. ಆಯ್ದ ನಿಲ್ದಾಣಗಳ ಒಳಭಾಗದಲ್ಲಿ ಮೆಟ್ಟಿಲುಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಗೋಡೆ ಸೇರಿದಂತೆ ಇತರೆಡೆ ಜಾಹೀರಾತು ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಒಳಾಂಗಣ ಜಾಹೀರಾತು ಪ್ರದರ್ಶನದಿಂದ ವಾರ್ಷಿಕ 30 ರಿಂದ 35 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ಯಾಕೇಜ್-1: ವೈಟ್‌ಫೀಲ್ಡ್‌ನಿಂದ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದವರೆಗೆ ಒಟ್ಟು 22 ನಿಲ್ದಾಣಗಳು. ಪ್ಯಾಕೇಜ್-2: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆಯಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ಒಟ್ಟು 14 ನಿಲ್ದಾಣಗಳು. ಪ್ಯಾಕೇಜ್-3: ನಾಡಪ್ರಭು ಕೆಂಪೇಗೌಡ, ಮೆಜೆಸ್ಟಿಕ್‌ನಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ 13 ನಿಲ್ದಾಣಗಳು ಹಾಗೂ ಪ್ಯಾಕೇಜ್-4: ಚಿಕ್ಕಪೇಟೆಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣದವರೆಗೆ 15 ನಿಲ್ದಾಣಗಳು. ಹೀಗೆ ಜಾಹೀರಾತಿಗೆ ಪ್ಯಾಕೇಜ್ ಸಿದ್ದಪಡಿಸಿದೆ.



















