ಬೆಂಗಳೂರು : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿಯಂತ್ರಣದಲ್ಲಿರುವ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ಕರ್ನಾಟಕ ಸರ್ಕಾರವು ಸಾರ್ವಜನಿಕ ಜಾಹೀರಾತು ನಿಧಿಯನ್ನು ಅಸಮಾನವಾಗಿ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಾದಕ್ಕೆ ಕಾರಣವಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಜಾಹೀರಾತು ನಿಧಿ ಹೋಗಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿ ಸೃಷ್ಟಿಸಿದೆ. ದಾಖಲೆಗಳ ಪ್ರಕಾರ.. ಸತತ ಎರಡು ಹಣಕಾಸು ವರ್ಷಗಳ ಕಾಲ ಕರ್ನಾಟಕದ ಜಾಹೀರಾತು ವೆಚ್ಚದ ಏಕೈಕ ಅತಿದೊಡ್ಡ ಫಲಾನುಭವಿಯಾಗಿ ನ್ಯಾಷನಲ್ ಹೆರಾಲ್ಡ್ ಹೊರಹೊಮ್ಮಿದೆ.

2023–24ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ರಾಜ್ಯ ಖಜಾನೆಯಿಂದ ಸುಮಾರು 1.90 ಕೋಟಿ ರೂಪಾಯಿ ಹಣ ನೀಡಲಾಗಿದೆ. ಹಾಗೆಯೇ 2024–25ರಲ್ಲಿ ಸುಮಾರು 99 ಲಕ್ಷ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ದಿನಪತ್ರಿಕೆಗಳಿಗಿಂತ ನ್ಯಾಷನಲ್ ಹೆರಾಲ್ಡ್‌ಗೆ ನೀಡುತ್ತಿರುವ ಆದ್ಯತೆಯ ಪ್ರಮಾಣ ಎಲ್ಲರ ಹುಬ್ಬೇರುವಂತೆ ಮಾಡಿದ್ದು, 2024–25ರಲ್ಲಿ ಕರ್ನಾಟಕವು ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿನ ಜಾಹೀರಾತುಗಳಿಗಾಗಿ 1.42 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಅದರಲ್ಲಿ ಶೇ. 69 ರಷ್ಟು ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ಹೋಗಿದೆ. ನ್ಯಾಷನಲ್ ಹೆರಾಲ್ಡ್‌ಗಿಂತ ದೊಡ್ಡ ಮಟ್ಟದಲ್ಲಿ ಪ್ರಸಾರ ಹೊಂದಿರುವ ರಾಷ್ಟ್ರೀಯ ಪತ್ರಿಕೆಗಳು ಅರ್ಧದಷ್ಟು ಹಣ ಕೂಡ ಸ್ವೀಕರಿಸಿಲ್ಲ. ಇನ್ನೂ ಕೆಲವು ಪತ್ರಿಕೆಗಳಿಗೆ ಯಾವುದೇ ರೀತಿಯ ಜಾಹೀರಾತುಗಳನ್ನು ಸರ್ಕಾರವೇ ನೀಡಿಲ್ಲ ಎನ್ನಲಾಗಿದೆ.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರವು ರಾಜಕೀಯ ಪ್ರೋತ್ಸಾಹಕ್ಕಾಗಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ ; ಲೈಂಗಿಕ ದೌರ್ಜನ್ಯ ಪ್ರಕರಣ | ಮ್ಯೂಸಿಕ್ ಮೈಲಾರಿ ಜಾಮೀನು ಅರ್ಜಿ ವಜಾ!



















