ಪ್ರಯಾಗ್‌ರಾಜ್:
ಉತ್ತರ ಪ್ರದೇಶದ ಮಹಾಕುಂಭ ನಗರದಲ್ಲಿ 2 ದಿನಗಳ ಕಾಲ ನಡೆದ ಧರ್ಮ ಸಂವಾದದಲ್ಲಿ ಸನಾತನ ವೈದಿಕ ರಾಷ್ಟ್ರ ನಿರ್ಮಾಣ ಮಾಡುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಕುರಿತು ಯತಿ ನರಸಿಂಘಾನಂದ ಟ್ರಸ್ಟ್ ಕಾರ್ಯದರ್ಶಿ ಉದಿತ್ ತ್ಯಾಗಿ ಅವರೇ ಮಾಹಿತಿ ನೀಡಿದ್ದಾರೆ.
ಶ್ರೀ ಪಂಚದಶನಮ್ ಜುನಾ ಅಖಾಡದ ಆಶ್ರಯದಲ್ಲಿ ನಡೆದ 2 ದಿನಗಳ ಧರ್ಮ ಸಭೆಯ ಬಳಿಕ, ಸಭೆಯಲ್ಲಾದ ನಿರ್ಣಯಗಳ ಕುರಿತು ಉದಿತ್ ತ್ಯಾಗಿಯವರು ಮಾತನಾಡಿದ್ದಾರೆ. ಜುನಾ ಅಖಾಡಾದ ನೇತೃತ್ವದಲ್ಲಿ ನಡೆದಿದ್ದ ಈ ಸಭೆಯಲ್ಲಿ ಸಾವಿರಾರು ಧಾರ್ಮಿಕ ಮುಖಂಡರು, ಸಾಧು ಸಂತರು ಭಾಗವಹಿಸಿದ್ದರು ಎಂದಿದ್ದಾರೆ. ಇಸ್ಲಾಮಿಕ್ ಜಿಹಾದ್‌ನಿಂದಾಗಿ ಜಗತ್ತಿನಲ್ಲಿರುವ ಹಿಂದೂ ಸಮುದಾಯದವರು ಆತಂಕ ಎದುರಿಸುವಂತಾಗಿದೆ ಎಂದು ಸಭೆ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು.
ಅಲ್ಲಿರುವ ಹಿಂದೂಗಳ ಹಕ್ಕುಗಳ ರಕ್ಷಣೆಗಾಗಿ ಒಕ್ಕೊರಲಿನಿಂದ ಧ್ವನಿಯೆತ್ತಬೇಕು ಎಂದು ಒತ್ತಾಯಿಸಲಾಗಿದೆ. ತತ್‌ಕ್ಷಣವೇ ದೇಶದಲ್ಲಿ ವಕ್ಫ್ ಮಂಡಳಿಗಳನ್ನು ರದ್ದು ಮಾಡಬೇಕೆಂದು ಇಡೀ ಸಂತ ಸಮುದಾಯ ಬೇಡಿಕೆಯಿಡಬೇಕು ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ.

ಯತಿ ನರಸಿಂಘಾನಂದ ಗಿರಿಯವರ ಕರೆಯ ಮೇರೆಗೆ, ಸಭೆಯಲ್ಲಿ ನೆರೆದಿದ್ದ ಸಾವಿರಾರು ಸಂತರು ಮತ್ತು ಭಕ್ತರು ಸನಾತನ ಧರ್ಮಕ್ಕಾಗಿ ಹಾಗೂ ಸನಾತನ ವೈದಿಕ ದೇಶದ ನಿರ್ಮಾಣಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಡುವ ಶಪಥ ಮಾಡಿದರು. ಸನಾತನ ಧರ್ಮದ ಮೇಲಾಗುತ್ತಿರುವ ನಿರಂತರ ದಾಳಿಯಿಂದ ಜುನಾ ಅಖಾಡಕ್ಕೆ ಬಹಳ ನೋವಾಗಿದೆ. ಸನಾತನ ಧರ್ಮವನ್ನು ರಕ್ಷಿಸಲು ದೊಡ್ಡ ಮಟ್ಟದ ಹೋರಾಟಕ್ಕೂ ಅಖಾಡ ಸಿದ್ಧವಾಗುತ್ತಿದೆ.
ಧರ್ಮದ ರಕ್ಷಣೆಗಾಗಿ ಯುವಶಕ್ತಿಯನ್ನು ಬಳಸಿಕೊಳ್ಳಲೂ ನಿರ್ಧರಿಸಲಾಗಿದೆ ಎಂದೂ ತ್ಯಾಗಿ ತಿಳಿಸಿದ್ದಾರೆ. ಇನ್ನು, ಇಸ್ಲಾಮಿಕ್ ಜಿಹಾದ್ ವಿರುದ್ಧ ಸೈದ್ಧಾಂತಿಕ ಹೋರಾಟಕ್ಕೆ ನಿರ್ಧರಿಸಿರುವ ಯತಿ ನರಸಿಂಘಾನಂದ ಗಿರಿಯವರ ಬೆಂಬಲಕ್ಕೆ ನಿಲ್ಲಲು ಎಲ್ಲರೂ ನಿರ್ಧರಿಸಿದ್ದಾರೆ ಎಂದೂ ಹೇಳಿದ್ದಾರೆ. ಸೋಮವಾರ ಸನಾತನ ಮಂಡಳಿ ರಚನೆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.