ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಆಂಡ್ ಗ್ಯಾಂಗ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನದ ಜೊತೆಗೆ 144 ಸೆಕ್ಷನ್ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ (Annapoorneshwari Police Station) ಸುತ್ತಮುತ್ತ 144 ಸೆಕ್ಷನ್ ಹಾಕಿದ್ದರಿಂದಾಗಿ ವಾಹನ ಸವಾಹರು ಪರದಾಟ ನಡೆಸಿದ್ದಾರೆ. ರಸ್ತೆ ನಿರ್ಬಂಧ ಮಾಡಿರುವುದಕ್ಕೆ ಜನರು ಪರದಾಟ ನಡೆಸುವಂತಾಯಿತು. ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ಸಂಚರಿಸಲು ವಾಹನ ಸವಾರರು ಪರದಾಡಬೇಕಾಯಿತು. ಪೊಲೀಸರ ಈ ನಡೆಗೆ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆ ಆರೋಪಿಗಳಿಗೆ ಠಾಣೆಯಲ್ಲಿ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಯಾರೋ ಒಬ್ಬರಿಗೋಸ್ಕರ ಈ ರೀತಿ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಪೊಲೀಸ್ ಸ್ಟೇಷನಾ..? ಇಲ್ಲ ಮದುವೆ ಮನೆನಾ..?. ಪಕ್ಕದಲ್ಲಿ ಮದುವೆ ಹಾಲ್ ಇದೆ. ಇಲ್ಲಿ ಬಿಗರೂಟ ಸ್ಟೇಷನ್ ನಲ್ಲಿ ಬಿಗರೂಟ ಹಾಕಿಸುತ್ತಿರಬಹುದು ಎಂದು ಜನರು ಲೇವಡಿ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ 14 ಮಂದಿ ಆರೋಪಿಗಳು ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ. ಠಾಣೆಯ ಆವರಣದ ಗೋಡೆಗೆ ಪೊಲೀಸರು ಶಾಮಿಯಾನ ಹಾಕಿದ್ದಾರೆ. ಅಲ್ಲದೇ ಠಾಣೆಯ ಹತ್ತಿರ 144 ಸೆಕ್ಷನ್ ಜಾರಿಯಲ್ಲಿದೆ. ಸಾರ್ವಜನಿಕರ ದೂರುಗಳನ್ನು ಕೂಡ ಪೊಲೀಸರು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
