ಚಂಡೀಗಢ : ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರ್ಣ್ ಕುಮಾರ್ ಅವರು ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂಡೀಗಢದ ಸೆಕ್ಟರ್ -11ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತ ಘಟನೆ ಹರಿಯಾಣ ಪೊಲೀಸರು ಮತ್ತು ಆಡಳಿತ ವಲಯದಲ್ಲಿ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ.
ಸದ್ಯ ಚಂಡೀಗಢ ಪೊಲೀಸರು, ಹರಿಯಾಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಮಾರ್ ಅವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷ ವೈ. ಪೂರ್ಣ್ ಕುಮಾರ್ ಅವರು ಕೆಲವು ಐಪಿಎಸ್ ಅಧಿಕಾರಿಗಳ ಬಡ್ತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈ ಅಧಿಕಾರಿಗಳು 1991, 1996, 1997 ಮತ್ತು 2005 ರ ಬ್ಯಾಚ್‌ಗಳಿಗೆ ಸೇರಿದವರಾಗಿದ್ದರು. ಈ ಬಡ್ತಿಗಳನ್ನು ಅನುಚಿತವಾಗಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಪತ್ರ ಬರೆದಿದ್ದರು. ಹಣಕಾಸು ಇಲಾಖೆಯು ಗೃಹ ಸಚಿವಾಲಯದ ನಿಯಮಗಳನ್ನು ನಿರ್ಲಕ್ಷಿಸಿ ಬಡ್ತಿಗಳನ್ನು ಸ್ವಂತವಾಗಿ ಅನುಮೋದಿಸಿದೆ ಎಂದು ಆಪಾದಿಸಿದ್ದರು.
ವೈ. ಪೂರ್ಣ್ ಕುಮಾರ್ ಎಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದರು. ಅವರನ್ನು ಸೆ.29ರಂದು ರೋಹ್ಟಕ್‌ನ ಸುನಾರಿಯಾ ಜೈಲಿಗೆ ವರ್ಗಾಯಿಸಲಾಗಿತ್ತು. ಇನ್ನು ವೈ. ಪೂರ್ಣ್ ಕುಮಾರ್ ಅವರ ಪತ್ನಿ ಅಮನ್ ಪಿ. ಕುಮಾರ್ ಕೂಡ ಐಪಿಎಸ್ ಅಧಿಕಾರಿಯಾಗಿದ್ದು, ಅವರು ಅ.5ರಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಅಧಿಕಾರಿಗಳೊಂದಿಗೆ ಜಪಾನ್ ಪ್ರವಾಸಕ್ಕೆ ಹೋಗಿದ್ದಾರೆ. ನಾಳೆ ಸಂಜೆ ಭಾರತಕ್ಕೆ ವಾಪಾಸ್ ಆಗಲಿದ್ದಾರೆ.