ವಾಷಿಂಗ್ಟನ್ : ಚೀನಾದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಘೋಷಣೆ ಮಾಡಿದ್ದಾರೆ. ಈ ಮೂಲಕ ಚೀನಾ ವಿರುದ್ಧದ ವಾಣಿಜ್ಯ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ‘ರೇರ್-ಅರ್ಥ್’ ಖನಿಜಗಳ ರಫ್ತಿನ ಮೇಲೆ ಚೀನಾ ಹೊಸ ನಿಯಂತ್ರಣಗಳನ್ನು ಹೇರಿದ ಬೆನ್ನಲ್ಲೇ ಟ್ರಂಪ್ ಈ ದಿಟ್ಟ ಕ್ರಮವನ್ನು ಪ್ರಕಟಿಸಿದ್ದಾರೆ.
ನವೆಂಬರ್ 1ರಿಂದ ಈ ಹೊಸ ಸುಂಕಗಳು ಜಾರಿಗೆ ಬರಲಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಸೆಮಿಕಂಡಕ್ಟರ್‌ಗಳು, ಯುದ್ಧ ವಿಮಾನಗಳು ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳ ತಯಾರಿಕೆಯಲ್ಲಿ ‘ರೇರ್-ಅರ್ಥ್'(ಭೂಮಿಯಲ್ಲಿರುವ ಅಪರೂಪದ ಖನಿಜಗಳು) ಖನಿಜಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಚೀನಾದ ಈ ರಫ್ತು ನಿರ್ಬಂಧವು ಅಮೆರಿಕದ ಕೈಗಾರಿಕಾ ಮತ್ತು ರಕ್ಷಣಾ ವಲಯಕ್ಕೆ ನೇರ ಹೊಡೆತ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ತಮ್ಮ ‘ಟ್ರುಥ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಚೀನಾದ ನಿಲುವನ್ನು “ನಂಬಲಾಗದಷ್ಟು ಆಕ್ರಮಣಕಾರಿ” ಮತ್ತು “ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಮಾಡಿದ ನೈತಿಕ ಅವಮಾನ” ಎಂದು ಜರಿದಿದ್ದಾರೆ.
ಟ್ರಂಪ್ ನಿರ್ಧಾರದ ಹಿಂದಿನ ಕಾರಣಗಳೇನು?
ಪ್ರತೀಕಾರ : ಚೀನಾದ ‘ರೇರ್-ಅರ್ಥ್’ ಖನಿಜಗಳ ಮೇಲಿನ ರಫ್ತು ನಿರ್ಬಂಧವು ಅಮೆರಿಕದ ಕೈಗಾರಿಕೆ ಮತ್ತು ರಕ್ಷಣಾ ವಲಯಕ್ಕೆ ನೇರ ಹೊಡೆತ ನೀಡಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
ರಾಜಕೀಯ : ವ್ಯಾಪಾರದ ವಿಷಯದಲ್ಲಿ ತಾವು ಕಠಿಣ ನಿಲುವಿನ ನಾಯಕ ಎಂಬುದಾಗಿ ತಮ್ಮ ಬೆಂಬಲಿಗರ ಮುಂದೆ ಬಿಂಬಿಸಿಕೊಳ್ಳುವ ರಾಜಕೀಯ ಉದ್ದೇಶವೂ ಇದರ ಹಿಂದಿದೆ.
ತಂತ್ರಗಾರಿಕೆ : ಟ್ರಂಪ್ ಯಾವಾಗಲೂ ಸುಂಕಗಳನ್ನು ಮಾತುಕತೆಗಾಗಿ ಒಂದು ಅಸ್ತ್ರವಾಗಿ ಬಳಸುತ್ತಾರೆ. ಚೀನಾವನ್ನು ಮತ್ತೆ ಅಮೆರಿಕದ ಷರತ್ತುಗಳ ಮೇಲೆ ಮಾತುಕತೆಗೆ ಬರುವಂತೆ ಒತ್ತಡ ಹೇರುವುದು ಇದರ ಹಿಂದಿನ ತಂತ್ರಗಾರಿಕೆಯಾಗಿರಬಹುದು.
ಜಾಗತಿಕ ವರ್ಚಸ್ಸು : ಮಧ್ಯಪ್ರಾಚ್ಯದಲ್ಲಿ ಶಾಂತಿ ಒಪ್ಪಂದದ ಬಗ್ಗೆ ಘೋಷಣೆ ಮಾಡಿದ ದಿನವೇ ಈ ಕಟು ಆರ್ಥಿಕ ನಿರ್ಧಾರವನ್ನು ಪ್ರಕಟಿಸುವ ಮೂಲಕ, ಜಾಗತಿಕವಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಪ್ರಯತ್ನವೂ ಇದಾಗಿದೆ.
ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಎಪೆಕ್ ಶೃಂಗಸಭೆಯಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗುವ ನಿರೀಕ್ಷೆಯಿತ್ತು. ಆದರೆ, ಚೀನಾದ ಈ ನಡೆ ಬಳಿಕ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲು ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಟ್ರಂಪ್ ಹೇಳಿದ್ದು, ಸಭೆ ನಡೆಯುವುದು ಅನುಮಾನವಾಗಿದೆ. ಟ್ರಂಪ್ ಅವರ ಘೋಷಣೆಯು ಷೇರು ಮಾರುಕಟ್ಟೆಗಳ ಮೇಲೆ ತಕ್ಷಣದ ಪರಿಣಾಮ ಬೀರಿದೆ. ಡೌ ಜೋನ್ಸ್ ಸುಮಾರು 900 ಅಂಕಗಳಷ್ಟು ಕುಸಿದರೆ, ಎಸ್&ಪಿ 500 ಶೇ. 2.7 ಮತ್ತು ನಾಸ್ಡಾಕ್ ಶೇ. 3.5 ರಷ್ಟು ಇಳಿಕೆ ಕಂಡಿವೆ. ಮುಂಬರುವ ಹಬ್ಬಗಳ ಋತುವಿನ ಸಂದರ್ಭದಲ್ಲಿ ಈ ಹೊಸ ವಾಣಿಜ್ಯ ಸಮರವು ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.