ಪ್ರಯಾಗ್‌ರಾಜ್: ಕಳೆದ ವರ್ಷ ಕೈಗಾರಿಕೋದ್ಯಮಿ, ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರನ ವಿವಾಹ ಕಾರ್ಯಕ್ರಮವು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈಗ ದೇಶದ ಮತ್ತೊಬ್ಬ ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಮದುವೆ ವಿಚಾರ ಸದ್ದು ಮಾಡುತ್ತಿದೆ. ಫೆಬ್ರವರಿ 7ರಂದು ಜೀತ್ ಅದಾನಿ ಅವರು ಗುಜರಾತ್‌ನ ವಜ್ರೋದ್ಯಮಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾರನ್ನು ವಿವಾಹವಾಗಲಿದ್ದಾರೆ. ಸೋಮವಾರ ಪ್ರಯಾಗ್ ರಾಜ್‌ನ ಮಹಾಕುಂಭಮೇಳಕ್ಕೆ ಆಗಮಿಸಿದ್ದ ಅದಾನಿ ಕುಟುಂಬವೇ ಈ ವಿಚಾರವನ್ನು ಸ್ಪಷ್ಟಪಡಿಸಿದೆ.
ಜೀತ್-ದಿವಾ ವಿವಾಹವು ಅದ್ಧೂರಿಯಾಗಿ ನಡೆಯಲಿದೆ, ಟೇಯ್ಲರ್ ಸ್ವಿಫ್ಟ್, ಜಸ್ಟಿನ್ ಬೇಬರ್, ಕರ್ಡಾಶಿಯನ್ ಸಹೋದಿಯರು, ದಿಲ್ಜಿತ್ ದೋಸಾಂಜ್, ಸತ್ಯ ನಾಡೆಲ್ಲಾ, ಕೋಲ್ಡ್‌ಪ್ಲೇ, ಬ್ರಿಟನ್ ದೊರೆ ಚಾರ್ಲ್ಸ್, ಪೋಪ್ ಫ್ರಾನ್ಸಿಸ್ ಸೇರಿದಂತೆ ದೇಶ-ವಿದೇಶಗಳ ಗಣ್ಯರು, ಸೆಲೆಬ್ರಿಟಿಗಳ ದಂಡೇ ಆಗಮಿಸಲಿದೆ, ದೇಶವು ಮತ್ತೊಂದು ಐಷಾರಾಮಿ ಮದುವೆಗೆ ಸಾಕ್ಷಿಯಾಗಲಿದೆ ಎಂಬೆಲ್ಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಗೌತಮ್ ಅದಾನಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ, ಎಲ್ಲ ಗಾಳಿಸುದ್ದಿಗಳಿಗೂ ತೆರೆ ಎಳೆದಿದ್ದಾರೆ. “ನಾವು ಕೂಡ ಜನಸಾಮಾನ್ಯರು. ಜೀತ್ ಇಂದು ಗಂಗಾಮಾತೆಯ ಆಶೀರ್ವಾದ ಪಡೆಯಲೆಂದು ಮಹಾಕುಂಭಮೇಳಕ್ಕೆ ಬಂದಿದ್ದಾನೆ. ಅವನ ಮದುವೆಯು ಅತ್ಯಂತ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಿ ನಡೆಯುತ್ತೆ ಮದುವೆ?
2023ರ ಮಾರ್ಚ್ ನಲ್ಲೇ ಜೀತ್ ಮತ್ತು ದಿವಾ ಅವರ ನಿಶ್ಚಿತಾರ್ಥ ನೆರವೇರಿದೆ. ಫೆ.7ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಮದುವೆ ನಡೆಯಲಿದೆ. ಫೆ.5ರಿಂದಲೇ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ. 300ಕ್ಕಿಂತಲೂ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ಮದುವೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅದಾನಿ ಕುಟುಂಬ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.
ಯಾರೀ ಜೀತ್ ಅದಾನಿ?
ಗೌತಮ್ ಅದಾನಿಯವರ ಕಿರಿಯ ಪುತ್ರ. ದೇಶದ 6 ವಿಮಾನನಿಲ್ದಾಣಗಳ ಹೊಣೆ ಹೊತ್ತಿರುವ ಅದಾನಿ ಸಮೂಹದ ಅದಾನಿ ಏರ್‌ಪೋರ್ಟ್ಸ್‌ನ ನಿರ್ದೇಶಕರಾಗಿ ಜೀತ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆಂಡ್ ಅಪ್ಲೈಡ್ ಸೈನ್ಸಸ್ ಪದವೀಧರ. ಜೀತ್ ಅವರು ಪೈಲಟ್ ತರಬೇತಿಯನ್ನೂ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜೀತ್ ಅವರ ಹಿರಿಯ ಸಹೋದರ ಕರಣ್ ಅವರು ಅದಾನಿ ಪೋರ್ಟ್ಸ್‌ನ ಹೊಣೆ ಹೊತ್ತಿದ್ದು, ಅವರು ಪರಿಧಿ ಅದಾನಿಯವರನ್ನು ವಿವಾಹವಾಗಿದ್ದಾರೆ.
ದಿವಾ ಜೈಮಿನ್ ಶಾ ಯಾರು?
ವಜ್ರೋದ್ಯಮ ಜಗತ್ತಿನಲ್ಲಿ ಖ್ಯಾತಿ ಪಡೆದಿರುವ ಗುಜರಾತ್ ನ ವಜ್ರಗಳ ಉದ್ಯಮಿ ಜೈಮಿನ್ ಶಾ ಅವರ ಪುತ್ರಿಯೇ ದಿವಾ ಜೈಮಿನ್ ಶಾ. ಈ ಕುಟುಂಬವು ಸಾರ್ವಜನಿಕರಿಂದ ಅಂತರ ಕಾಯ್ದುಕೊಂಡು ಬಂದಿರುವ ಕಾರಣ ದಿವಾ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.