ಬೆಂಗಳೂರು: ಲೀಗಲ್ ನೋಟಿಸ್ ಕಳುಹಿಸಿರುವ ನಟ ಧನುಷ್ ವಿರುದ್ಧ ನಟಿ ನಯನತಾರಾ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಪತ್ರ ಬರೆದ ನಯನತಾರಾ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ‘Nayanthara: Beyond the Fairytale’ ಸಾಕ್ಷ್ಯಚಿತ್ರದಲ್ಲಿ ‘ನಾನುಮ್ ರೌಡಿ ಧಾನ್’ ಸಿನಿಮಾದ ಮೂರು ಸೆಕೆಂಡು ದೃಶ್ಯ ಬಳಸಿದ್ದಕ್ಕಾಗಿ ನಟಿ ಹಾಗೂ ನಟನ ಮಧ್ಯೆ ಈ ವಾರ್ ಶುರುವಾಗಿದೆ. ಈ ಕುರಿತು ನಟ ಧನುಷ್ ಲೀಗಲ್ ನೋಟಿಸ್ ನೀಡಿದ್ದಾರೆ. ಇದಕ್ಕೆ ನಟಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
2015ರ ನಾನುಮ್ ರೌಡಿ ಧಾನ್ ಚಿತ್ರದ ದೃಶ್ಯಗಳನ್ನು ಬಳಕೆ ಮಾಡಲು ಧನುಷ್ ಅವರಲ್ಲಿ ಮನವಿ ಮಾಡಿದ್ದೆ. ಧನುಷ್ ಅನುಮತಿ ನಿರಾಕರಿಸಿದರು. ಹೀಗಾಗಿ ಪ್ರೀತಿ ಹಾಗೂ ಮದುವೆ ಸೇರಿದಂತೆ ಜೀವನದ ಅಮೂಲ್ಯ ಕ್ಷಣಗಳ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಜನರ ಫೋನ್ ಗಳಿಂದ ಚಿತ್ರೀಕರಿಸಲಾಯಿತು. ಅಭಿಮಾನಿಗಳು ನೋಡಿದ ಧನುಷ್ ಬೇರೆ. ನಿಜವಾಗಿಯೂ ಇರುವ ಧನುಷ್ ವ್ಯಕ್ತಿತ್ವ ಬೇರೆ. ಅವರು ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಅನಿಸಿರಲಿಲ್ಲ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಬೆಂಬಲದಿಂದ ಒಂಟಿಯಾಗಿ ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ನಾನು ನಿಮ್ಮ ಲೀಗಲ್ ನೋಟಿಸ್ ಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.