ಚೆನ್ನೈ: ನಟ ಸೂರ್ಯ ಅಭಿನಯಿಸಿದ್ದ ಬಹುನಿರೀಕ್ಷಿತ ಚಿತ್ರ ಕಂಗುವಾ ( Kanguva ) ಗೆ ಬಿಡುಗಡೆಗೆ ಎರಡು ದಿನ ಇದೆ ಎನ್ನುವಾಗಲೇ ಸಂಕಷ್ಟ ಶುರುವಾಗಿದೆ.
ಕಂಗುವಾ ಚಿತ್ರ ನ. 14 ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರೀ ಬುಕ್ಕಿಂಗ್ ಆರಂಭವಾಗಿದ್ದು, ಟಿಕೆಟ್ಗಳು ಸೋಲ್ಡ್ ಆಗುತ್ತಿವೆ. ಆದರೆ, ಈ ಮಧ್ಯೆ ಚಿತ್ರ ತಂಡಕ್ಕೆ ಆಘಾತ ಎದುರಾಗಿದೆ.
ಸಿನಿಮಾ ಬಿಡುಗಡೆ ಮಾಡದಂತೆ ಈಗ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದು, ಸಂಕಷ್ಟ ಶುರುವಾಗಿದೆ. ಚೆನ್ನೈ ಮೂಲದ ಅರ್ಜುನ್ ಲಾಲ್ ಅವರಿಂದ ಸ್ಟುಡಿಯೋ ಗ್ರೀನ್ 20 ಕೋಟಿ ರೂ. ಸಾಲ ಪಡೆದಿದ್ದು, ನವೆಂಬರ್ 13ರ ಒಳಗೆ ಪಾವತಿಸಬೇಕು. ಇಲ್ಲವಾದರೆ, ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಲಾಗಿದೆ.
ಉದ್ಯಮಿ ಅರ್ಜುನ್ ಲಾಲ್ ನಿಧನರಾಗಿದ್ದಾರೆ. ಆದರೆ, ಅರ್ಜುನ್ ಲಾಲ್ ಕಂಪನಿ ದಿವಾಳಿಯಾಗಿದೆ. ವಂಚನೆಯ ಆರೋಪ ಕೂಡ ಇದೆ. ಹೀಗಾಗಿ ಅವರ ಆಸ್ತಿಗಳು ಮದ್ರಾಸ್ ಹೈಕೋರ್ಟ್ ನಿಯಂತ್ರಣದಲ್ಲಿದೆ. ಹೀಗಾಗಿ ಸಾಲಗಾರರಿಂದ ವಸೂಲಿ ಮಾಡುವ ಕೆಲಸವನ್ನೂ ಕೋರ್ಟ್ ಮಾಡುತ್ತಿದೆ. ಈ ಮಧ್ಯೆ ಕಂಗುವಾ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್, ಅರ್ಜುನ್ ಲಾಲ್ ರಿಂದ 20 ಕೋಟಿ ರೂ. ಸಾಲ ಪಡೆದಿತ್ತು. ಆದರೆ, ಈ ಹಣ ಮರಳಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 13ರ ಒಳಗೆ ಹಣ ಪಾವತಿಸುವಂತೆ ಕೋರ್ಟ್ ಗಡುವು ನೀಡಿದೆ. ಇಲ್ಲವಾದಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ.
ಶಿವ ನಿರ್ದೇಶನದ ಕಂಗುವಾ ಚಿತ್ರವು ದೊಡ್ಡ ಬಜೆಟ್ ನಲ್ಲಿ ಸಿದ್ಧವಾಗಿದೆ. ಸುಮಾರು 450 ಕೋಟಿ ರೂ. ನಿಂದ 400 ಕೋಟಿ ರೂ. ವರೆಗೂ ಬಜೆಟ್ ಹೊಂದಿದೆ. ಈ ಚಿತ್ರವು ತಮಿಳು ಅಲ್ಲದೇ, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ವಿದೇಶಿ ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸಾಕಷ್ಟು ಖರ್ಚು ಮಾಡಿ ಪ್ರಚಾರ ಕೂಡ ಮಾಡಿದೆ. ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇರುವದರಿಂದ ಟಿಕೆಟ್ ಬುಕ್ಕಿಂಗ್ ಕೂಡ ಆಗಿವೆ. ಹಲವು ಥಿಯೇಟರ್ಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆಗಿವೆ. ಆದರೆ, ಈಗ ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.