ಮುಂಬೈ | ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದು, ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆದರಿಕೆ ಬಂದ ನಂತರ ಮುಂಬೈ ಪೊಲೀಸರಿಗೆ ನಟ ರಣವೀರ್ ಸಿಂಗ್ ಮಾಹಿತಿ ನೀಡಿದ್ದು, ಕೂಡಲೇ ನಟನ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆ ಸಂದೇಶ ಕಳಿಸಿದವರು ತಮ್ಮನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ವಾಯ್ಸ್ ಮೆಸೇಜ್‌ನಲ್ಲಿರೋ ಧ್ವನಿ ಯಾರದ್ದೂ ಎಂದು ಪತ್ತೆಹಚ್ಚಲು ಮುಂದಾಗಿದ್ದಾರೆ. ಬೆದರಿಕೆ ಬಂದ ನಂತರ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ವಾಸಿಸುವ ಹೌಸಿಂಗ್ ಸೊಸೈಟಿಯ ನಿವಾಸದ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ.
ಬಾಲಿವುಡ್ ನಟ, ನಿರ್ಮಾಪಕರಿಗೆ ಬೆದರಿಕೆಗಳು ಬರುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು. ಪುಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದರು. ಬಂಧಿತರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದವರು ಎಂದು ಪೊಲೀಸರು ದೃಢಪಡಿಸಿದ್ದರು.
ಇದನ್ನೂ ಓದಿ : ಏ.1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ | ಪ್ಯಾನ್ ಕಾರ್ಡ್ ನಿಯಮದ ಬಗ್ಗೆ ಗೊತ್ತಿರದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!



















