ನಟ, ನಿರ್ದೇಶಕ ಗುರುಪ್ರಸಾದ್ ಸಾವನ್ನಪ್ಪಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
‘ಮಠ’, ‘ಎದ್ದೇಳು ಮಂಜುನಾಥ’ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಗುರುಪ್ರಸಾದ್ ದಿಢೀರ್ ಸಾವು ಚಿತ್ರರಂಗದ ಆತಂಕಕ್ಕೆ ಕಾರಣವಾಗಿದೆ. ಗುರುಪ್ರಸಾದ್ ಅವರಿಗೆ 50 ವರ್ಷ ವಯಸ್ಸಾಗಿತ್ತು. ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ನಿರ್ದೇಶನ ಮಾಡಿದ್ದ ರಂಗನಾಯಕ ಚಿತ್ರ ಹೀನಾಯಕ ಸೋಲು ಕಂಡಿತ್ತು. ಆನಂತರ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಅವರು ಎರಡನೇ ಮದುವೆ ಕೂಡ ಆಗಿದ್ದರು. ಆದರೆ, ಈಗ ನೇಣಿಗೆ ಶರಣಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಹತ್ತಿರದ ಅಪಾರ್ಟ್ಮೆಂಟ್ ಒಂದರಲ್ಲಿ ಗುರುಪ್ರಸಾದ್ ವಾಸವಿದ್ದರು. ಅದೇ ಮನೆಯಲ್ಲಿ ಈಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.