ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬೇಲ್ ಮೇಲೆ ಹೊರಗಿದ್ದು, ಈಗ ಗನ್ ವಿಚಾರವಾಗಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ನಾನು ಸೆಲೆಬ್ರಿಟಿ ನನಗೆ ಗನ್ ಅವಶ್ಯಕತೆಯಿದೆ ಎಂದು ಉತ್ತರಿಸಿದ್ದಾರೆ. ಸದ್ಯ ನಟ ದರ್ಶನ್ ಗನ್ ಲೈಸೆನ್ಸ್ ಭವಿಷ್ಯ ಕಮಿಷನರ್ ಕೈ ಸೇರಿದೆ. ಗನ್ ಲೈಸೆನ್ಸ್ ಹಿಂಪಡೆಯುವ ಕುರಿತು ಪೊಲೀಸ್ ನೋಟಿಸ್ ಗೆ ಕೂಡ ದರ್ಶನ್ ಉತ್ತರ ನೀಡಿದ್ದಾರೆ.
ನಾನೊಬ್ಬ ಸೆಲೆಬ್ರಿಟಿಯಾಗಿದ್ದು, ನಾನು ಹೋದ ಕಡೆಗೆಲ್ಲ ಸಾಕಷ್ಟು ಜನರು ಸೇರುತ್ತಾರೆ. ಹೀಗಾಗಿ ನನಗೆ ಗನ್ ಅವಶ್ಯಕತೆ ಇದೆ.ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾದ ವಿಷಯವಾಗಿರುತ್ತದೆ. ನಾನು ಖಾಸಗಿ ಸೆಕ್ಯುರಿಟಿಯನ್ನು ನೇಮಿಸಿಕೊಂಡಿದ್ದರೂ ಭದ್ರತೆ ದೃಷ್ಠಿಯಿಂದ ವೈಯಕ್ತಿಕವಾಗಿ ಗನ್ ಲೈಸೆನ್ಸ್ ನನಗೆ ಅವಶ್ಯವಾಗಿದೆ. ಹೀಗಾಗಿ ನನ್ನ ಗನ್ ಲೈಸನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ದರ್ಶನ್ ಮನವಿ ಮಾಡಿದ್ದಾರೆ.
ಅಲ್ಲದೇ, ನನ್ನ ಮೇಲೆ ಸದ್ಯ ಚಾಲ್ತಿಯಲ್ಲಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದರೆ, ತಾವೇ ಸೂಕ್ತ ಕ್ರಮ ಜರುಗಿಸಬಹುದು ಎಂದು ಬೆಂಗಳೂರು ಆಡಳಿತ ವಿಭಾಗ ಡಿಸಿಪಿ ಪತ್ರದ ನೋಟಿಸ್ ಗೆ ದರ್ಶನ್ ಉತ್ತರ ನೀಡಿದ್ದಾರೆ.
ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಗೆ ಪೊಲೀಸರು ನೋಟಿಸ್ ನೀಡಿ, ನಿಮ್ಮ ಗನ್ ಲೈಸನ್ಸ್ ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ನೋಟಿಸ್ ನೀಡಿದ್ದರು.