ಬೆಂಗಳೂರು : ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಚ್ಛೇದನ ಕೋರಿ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
2014 ಡಿಸೆಂಬರ್ 18ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ದಂಪತಿಗಳಲ್ಲಿ ವೈಮನಸ್ಸು ಮೂಡಿದೆ. ದಂಪತಿಗೆ ಒಂದು ಹೆಣ್ಣು ಮಗುವಿದೆ. ವಿಚ್ಛೇದನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಮದುವೆಯಾಗಿ ಬರೋಬ್ಬರಿ 11 ವರ್ಷಗಳ ಬಳಿಕ ಇದೀಗ ಈ ದಂಪತಿ ವಿಮುಖರಾಗುತ್ತಿದ್ದಾರೆ. ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.
2003 ರಲ್ಲಿ ಬಿಡುಗಡೆಯಾಗಿದ್ದ ‘ಎಕ್ಸ್ಕ್ಯೂಸ್ ಮೀ’ ಸಿನೆಮಾ ಮೂಲಕ ಅಜಯ್ ರಾವ್ ಚಂದನವನಕ್ಕೆ ನಾಯಕ ನಟನಾಗಿ ಪ್ರವೇಶ ಪಡೆದಿದ್ದರು. ಅದಕ್ಕೆ ಮುನ್ನ ಸುದೀಪ್ ನಟನೆಯ ‘ಕಿಚ್ಚ’ ಸಿನೆಮಾದಲ್ಲಿ ಸುದೀಪ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ‘ತಾಜ್ ಮಹಲ್’, ‘ಪ್ರೇಮ್ ಕಹಾನಿ’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ-ಲೀಲಾ’ ಇನ್ನೂ ಹಲವು ಹಿಟ್ ಸಿನೆಮಾಗಳಲ್ಲಿ ಅಜಯ್ ನಟಿಸಿದ್ದರು. ಈ ವರ್ಷ ಬಿಡುಗಡೆಯಾದ ‘ಯುದ್ಧಕಾಂಡ 2” ಸಿನೆಮಾದಲ್ಲಿ ನಟನೆಯೊಂದಿಗೆ ನಿರ್ಮಾಣವನ್ನೂ ಮಾಡಿದ್ದರು.
ಅಜಯ್ ರಾವ್ ಸಿನೆಮಾದ ಕಾರಣಕ್ಕೆ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲದ ಹೊರೆಯಿಂದ ಅಜಯ್ ಪರದಾಡುತ್ತಿದ್ದರು. ದಂಪತಿಗಳ ನಡುವೆ ಬಿರುಕು ಮೂಡಲು ಸಾಲವೇ ಮೂಲ ಕಾರಣ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.


















