ಬೆಳಗಾವಿ: ರಾಜ್ಯದಲ್ಲಿನ ಅನಧಿಕೃತ ಔಷಧ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 37,120 ಖಾಸಗಿ ಔಷಧ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 7 ಜನತಾ ಬಜಾರ್ ಗಳು, 23 ಜನ ಸಂಜೀವಿನಿ ಕೇಂದ್ರಗಳು ಹಾಗೂ 178 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿಯಮಗಳನ್ನು ಉಲ್ಲಂಘಿಸಿದ 1,245 ಪರವಾನಗಿಗಳನ್ನು ಅಮಾನತುಗೊಳಿಸಿ, 292 ಪರವಾನಗಿಗಳನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ.
ಅಲ್ಲದೇ, ಮಾದಕ ಔಷಧಿಗಳ ದಾಸ್ತಾನು ಮತ್ತು ಮಾರಾಟದ ಬಗ್ಗೆ ನಿಗಾವಹಿಸುತ್ತಿದ್ದಾರೆ. ಖಾಸಗಿ ಔಷಧ ಮಳಿಗೆಗಳಲ್ಲಿ ಮಾದಕ ವಸ್ತುಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಮಾದರಿ ಪಡೆದು ರಾಜ್ಯದ ಔಷಧ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಿ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.